ಡಿ.ಕೆ.ಶಿವಕುಮಾರ್ ಪ್ರಮಾಣ ವಚನ : ಬಿಗಿ ಬಂದೋಬಸ್ತ್‌ಗೆ ಸೂಚನೆ
ಬೆಂಗಳೂರು : ಲೋಕಭವನದಲ್ಲಿ ನಾಳೆ(ಜೂ.3) ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಹಾಗೂ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್, ನಗರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಬಂದೋಬಸ್ತ್ ಬಗ್ಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಅಧಿಕಾರಿಗಳ ಸಭೆ ಬಳಿಕ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್, ಲೋಕಭವನಕ್ಕೆ ಆಹ್ವಾನಿತರಿಗೆ ಮಾತ್ರ ಪ್ರವೇಶವಿರಲಿದೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಸಣ್ಣ ಘಟನೆಗಳು ಆಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಿಧಾನಸೌಧ ಹಾಗೂ ಲೋಕಭವನ ಸುತ್ತ ಯಾವುದೇ ರೀತಿ ಸಂಚಾರ ದಟ್ಟಣೆಯಾಗದಂತೆ ಕರ್ತವ್ಯ ನಿರ್ವಹಿಸುವಂತೆ ಸಭೆಯಲ್ಲಿದ್ದ ಸಂಚಾರ ವಿಭಾಗದ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಆಯುಕ್ತರು ತಿಳಿಸಿದರು.
ವಿವಿಧ ವಿಭಾಗಗಳಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪಾಸ್ ಹಂಚಿಕೆ ಮಾಡಲಾಗಿದ್ದು, ಆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇವೆ. ಸಂಚಾರ ಮಾರ್ಗದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ರೋಡ್ ಶೋ ನಡೆಸುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೊರ ರಾಜ್ಯದಿಂದಲೂ ವಿಐಪಿಗಳು ಕಾರ್ಯಕ್ರಮಕ್ಕೆ ಬರುತ್ತಿರುವ ಹಿನ್ನೆಲೆ ಗಣ್ಯರ ಭದ್ರತೆಗೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
ಈ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು ಹಾಗೂ ಎಲ್ಲ ವಿಭಾಗಗಳ ಡಿಸಿಪಿಗಳು ಪಾಲ್ಗೊಂಡಿದ್ದರು.
ಸಂಚಾರ ಮಾರ್ಗ ಮಾರ್ಪಾಡು: ‘ಪ್ರಮಾಣವಚನ ಕಾರ್ಯಕ್ರಮದ ಹಿನ್ನೆಲೆ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಜೂ.3 ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8ರ ವರೆಗೆ ಕೆಲ ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಬೆಂಗಳೂರಿನ ಸಂಚಾರ ಪೊಲೀಸರು ತಿಳಿಸಿದ್ದಾರೆ.
ನಗರದ ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‍ನಿಂದ ಸಿ.ಟಿ.ಓ. ಜಂಕ್ಷನ್‍ವರೆಗೆ, ಸಿ.ಟಿ.ಓ. ವೃತ್ತದಿಂದ ಲೋಕಭವನದವರೆಗೆ, ಬಾಳೇಕುಂದ್ರಿ ಜಂಕ್ಷನ್‍ನಿಂದ ಅಂಬೇಡ್ಕರ್ ರಸ್ತೆ ಕಡೆಗೆ, ಕೆ.ಆರ್.ಸರ್ಕಲ್ ಕಡೆಯಿಂದ ಕಾಫಿಬೋರ್ಡ್ ಜಂಕ್ಷನ್‍ವರೆಗೆ, ರೇಸ್‍ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್‍ನಿಂದ ಸುಬ್ಬಣ್ಣ ಜಂಕ್ಷನ್‍ವರೆಗೆ, ಕ್ವೀನ್ಸ್ ಜಂಕ್ಷನ್ ಕಡೆಯಿಂದ ಸಿ.ಟಿ.ಓ ಜಂಕ್ಷನ್‍ವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪರ್ಯಾಯ ಮಾರ್ಗ: ನಗರದ ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‍ನಿಂದ ಸಿ.ಟಿ.ಓ. ಜಂಕ್ಷನ್‍ವರೆಗೆ ಹಾಗೂ ಸಿ.ಟಿ.ಓ. ವೃತ್ತದಿಂದ ಲೋಕಭವನದವರೆಗೆ ಸಂಚರಿಸುವ ವಾಹನಗಳು, ಬಿ.ಆರ್.ವಿ. ಜಂಕ್ಷನ್ ಬಳಿ ಶಿವಾಜಿನಗರ ಕಡೆಗೆ ಬಲತಿರುವು ಹಾಗೂ ಅನಿಲ್ ಕುಂಬ್ಳೆ ಜಂಕ್ಷನ್ ಕಡೆಗೆ ಎಡತಿರುವು ಪಡೆದು ಸಂಚರಿಸಬಹುದಾಗಿದೆ. ಕ್ಲೀನ್ಸ್ ರಸ್ತೆ ಹಾಗೂ ಶಿವಾಜಿನಗರ ಕಡೆಯಿಂದ ಬರುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್ ಬಳಿ ಕನ್ನಿಂಗ್‍ಹ್ಯಾಮ್ ರಸ್ತೆಯ ಮುಖಾಂತರ ಸಂಚರಿಸಬಹುದಾಗಿದೆ. ಕೆ.ಆರ್.ಸರ್ಕಲ್ ಕಡೆಯಿಂದ ಕಾಫಿಬೋರ್ಡ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ನೃಪತುಂಗ ರಸ್ತೆಯ ಮುಖಾಂತರ ಸಂಚರಿಸಬಹುದಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಎಲ್ಲೆಲ್ಲಿ ವಾಹನಗಳ ನಿಲುಗಡೆ ನಿಷೇಧ: ನಗರದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಬಾಳೇಕುಂದ್ರಿ ವೃತ್ತದಿಂದ ಕೆ.ಆರ್.ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ, ಲೋಕಭವನ ರಸ್ತೆ ಬಿ.ಆರ್.ವಿ.ವೃತ್ತದಿಂದ - ಲೋಕಭವನ ಜಂಕ್ಷನ್‍ವರೆಗೆ, ಎಲ್.ಎಚ್.ರಸ್ತೆ, ಲೋಕಭವನ ಜಂಕ್ಷನ್‍ನಿಂದ - ಚಾಲುಕ್ಯ ವೃತ್ತದವರೆಗೆ, ಬಾಳೇಕುಂದ್ರಿ ಜಂಕ್ಷನ್‍ನಿಂದ - ಕ್ವೀನ್ಸ್ ವೃತ್ತದವರೆಗೆ, ಪ್ಯಾಲೇಸ್ ರಸ್ತೆ, ಮೈಸೂರು ಬ್ಯಾಂಕ್ ವೃತ್ತದಿಂದ - ವಸಂತನಗರ ಕೆಳಸೇತುವೆವರೆಗೆ ಮುಂತಾದ ಕಡೆಗಳಲ್ಲಿ ವಾಹನ ನಿಲ್ಲಿಸುವುದು ನಿಷೇಧಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.