ಕೇಂದ್ರದಿಂದ ಬರಬೇಕಾದ 2,186 ಕೋಟಿ ರೂ. ಅನುದಾನ: ನ್ಯಾಯಾಲಯದ ಮೊರೆ ಹೋಗಲು ರಾಜ್ಯ ಸರಕಾರ ನಿರ್ಧಾರ
ಸುಪ್ರೀಂ ಕೋರ್ಟ್ | Photo Credit : PTI
ಬೆಂಗಳೂರು : ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಬರಬೇಕಿರುವ 2186.20 ಕೋಟಿ ರೂ.ಗಳಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಲು ರಾಜ್ಯ ಸರಕಾರ ನಿರ್ಧರಿಸಿದೆ. ಮಂಗಳವಾರ ಈ ಸಂಬಂಧ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಅಡ್ವೋಕೆಟ್ ಜನರಲ್ ಅವರೊಂದಿಗೆ ಸಭೆ ನಡೆಸಿ ಸಮಾಲೋಚನೆ ನಡೆಸಿದರು.
ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ, ಕೇಂದ್ರ ಸರಕಾರದೊಂದಿಗೆ ಸಂಘರ್ಷವಿಲ್ಲ, ಆದರೆ ರಾಜ್ಯಕ್ಕೆ ಬರಬೇಕಾದ 2186.20 ಕೋಟಿ ರೂ.ಗಳ ನ್ಯಾಯಯುತ ಹಕ್ಕಿಗಾಗಿ ಸುಪ್ರೀಂಕೋರ್ಟ್ನಲ್ಲಿ ಎಸ್ಎಲ್ಪಿ(ವಿಶೇಷ ಅನುಮತಿ ಅರ್ಜಿ) ಸಲ್ಲಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 2025ರ ಡಿಸೆಂಬರ್ ನಿಂದ ನಿರಂತರವಾಗಿ ಹಲವು ಪತ್ರಗಳನ್ನು ಬರೆದಿದ್ದರೂ, ಸ್ವತಃ ಮುಖ್ಯಮಂತ್ರಿಗಳೇ ಕೇಂದ್ರಕ್ಕೆ ಮನವಿ ಮಾಡಿದ್ದರೂ ತಾಂತ್ರಿಕ ಲೋಪದ ಕಾರಣ ಒಡ್ಡಿ ಹಣ ಬಿಡುಗಡೆ ಮಾಡದೆ ಕೇಂದ್ರ ಸರಕಾರ ರಾಜ್ಯಕ್ಕೆ ಘೋರ ಅನ್ಯಾಯ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ತಾವು ಸಚಿವರಾದ ತರುವಾಯ ರಾಜ್ಯದ ಎಲ್ಲ ಸಂಸತ್ ಸದಸ್ಯರಿಗೂ ಪತ್ರ ಬರೆದು ಕೇಂದ್ರದ ಮೇಲೆ ಒತ್ತಡ ತಂದು ಹಣ ಬಿಡುಗಡೆ ಮಾಡಿಸಲು ಮನವಿ ಮಾಡಿದ್ದೇನೆ, ಜೊತೆಗೆ ಖುದ್ದು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಲಲನ್ ಸಿಂಗ್, ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಮನವಿ ಸಲ್ಲಿಸಿದ್ದೇನೆ. ಆದಾಗ್ಯೂ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ಎಸ್.ಎಲ್.ಪಿ. ಸಲ್ಲಿಸಲು ಇಂದು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸಿದ್ದು, ಮುಂದಿನ ವಾರದೊಳಗೆ ಅರ್ಜಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ನಿರಾಕರಣೆಗೆ ಕೇಂದ್ರ ನೀಡುವ ಕಾರಣ: ಗ್ರಾಮ ಪಂಚಾಯತಿಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರ ಅನುದಾನ ಬಿಡುಗಡೆ ಮಾಡಿದ ಬಳಿಕ ರಾಜ್ಯ ಸರಕಾರ 10 ದಿನಗಳ ಒಳಗಾಗಿ ಗ್ರಾ.ಪಂ.ಗೆ ಹಣ ಬಿಡುಗಡೆ ಮಾಡಬೇಕು. ಇಲ್ಲವೆ ಬಡ್ಡಿ ಸಹಿತ ಪಾವತಿಸಬೇಕು ಮತ್ತು ಸ್ವೀಕೃತಿ ವಿವರಗಳನ್ನು ಇ-ಗ್ರಾಮ ಸ್ವರಾಜ್ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬೇಕು. 2024-25ರಲ್ಲಿ ಕೇಂದ್ರ ಸರಕಾರ ರಾಜ್ಯದ ಗ್ರಾ.ಪಂ.ಗಳಿಗೆ ಬಿಡುಗಡೆ ಮಾಡಿದ್ದ 2133.25 ಕೋಟಿ ರೂ. ಪೈಕಿ ಇ-ಗ್ರಾಮ್ ಸ್ವರಾಜ್ ಪೋರ್ಟಲ್ ನಲ್ಲಿ 1907 ಕೋಟಿ ರೂ. ಸ್ವೀಕೃತಿ ದಾಖಲಾಗಿದೆ. ವ್ಯತ್ಯಾಸ ಕೇವಲ 225 ಕೋಟಿ ರೂ. ಮಾತ್ರ. ಈ ಹಣವೂ ಭೌತಿಕವಾಗಿ ಗ್ರಾ.ಪಂ. ತಲುಪಿದೆ. ತಾಂತ್ರಿಕ ತೊಡಕಿನಿಂದ ಪೋರ್ಟಲ್ ನಲ್ಲಿ ಪ್ರತಿಬಿಂಬಿತವಾಗಿಲ್ಲ ಎಂದು ಹಣ ಬಿಡುಗಡೆ ಮಾಡದಿರುವುದು ಎಷ್ಟು ಸರಿ ಎಂದು ಈಶ್ವರ್ ಖಂಡ್ರೆ ಪ್ರಶ್ನಿಸಿದರು.
ಬೇರೆ ರಾಜ್ಯಕ್ಕೆ ವಿನಾಯಿತಿ, ಕರ್ನಾಟಕಕ್ಕೆ ಏಕೆ ಷರತ್ತು: ಕೇಂದ್ರದ ಈ ಷರತ್ತು, ನಿರ್ಬಂಧ ಗಳನ್ನು ಕರ್ನಾಟಕ ಹಾಗೂ ಕೆಲವು ರಾಜ್ಯಗಳಿಗೆ ಮಾತ್ರ ಅನ್ವಯಿಸಲಾಗುತ್ತಿದೆ. ಆದರೆ, ಉತ್ತರಾಖಂಡಕ್ಕೆ 470 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಪೋರ್ಟಲ್ ನಲ್ಲಿ ಸ್ವೀಕೃತಿ ಸಂಪೂರ್ಣ ಶೂನ್ಯವಾಗಿದೆ. ಆದರೂ ಅವರಿಗೆ 2025-26ನೇ ಸಾಲಿನಲ್ಲಿ ಪೂರ್ತಿ ಅನುದಾನ ಬಿಡುಗಡೆ ಮಾಡಿದ್ದಾರೆ. ಗುಜರಾತ್ ರಾಜ್ಯಕ್ಕೆ ಕೂಡ 2619 ಕೋಟಿ ಬಿಡುಗಡೆ ಮಾಡಿದ್ದಾರೆ. ಪೋರ್ಟಲ್ ನಲ್ಲಿ 2104 ಕೋಟಿ ಸ್ವೀಕೃತಿ ಆಗಿದೆ. ವ್ಯತ್ಯಾಸ 515 ಕೋಟಿ ಇದೆ ಎಂದು ಅವರು ಮಾಹಿತಿ ನೀಡಿದರು.
ಅಸ್ಸಾಂ ರಾಜ್ಯಕ್ಕೆ 1315 ಕೋಟಿ ರೂ. ಬಿಡುಗಡೆ ಆಗಿದೆ. ಪೋರ್ಟಲ್ ನಲ್ಲಿ 447 ಕೋಟಿ ರೂ. ಸ್ವೀಕೃತಿ ಇದೆ. ವ್ಯತ್ಯಾಸ 867 ಕೋಟಿ ರೂ. ಇದೆ. ಇನ್ನು ಬಿಹಾರ ರಾಜ್ಯಕ್ಕೆ 4109 ಕೋಟಿ ರೂ.ಅನುದಾನ ಬಿಡುಗಡೆ ಆಗಿದೆ. ಅವರ ಸ್ವೀಕೃತಿ 1775 ಕೋಟಿ ರೂ. ಮಾತ್ರ. ವ್ಯತ್ಯಾಸ 2334 ಕೋಟಿ ರೂ. ಇದೆ. ಹೀಗಿದ್ದೂ ಈ ಎಲ್ಲ ರಾಜ್ಯಗಳಿಗೆ ಪೂರ್ಣ ಅನುದಾನ ನೀಡಿದ್ದಾರೆ. ಕರ್ನಾಟಕಕ್ಕೆ ಏಕೆ ನೀಡುತ್ತಿಲ್ಲ. ಇದು ಒಂದು ಕಣ್ಣಿಗೆ ಸುಣ್ಣ ಮತ್ತು ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಆಗಿದೆ ಎಂದು ಈಶ್ವರ್ ಖಂಡ್ರೆ ಕಿಡಿಗಾರಿದರು.
ಹಿಂದೆ ಸುಪ್ರೀಂಕೋರ್ಟ್ ಈ ರೀತಿ ರಾಜ್ಯ ಮತ್ತು ಕೇಂದ್ರ ಸಂಘರ್ಷ ಮಾಡಿಕೊಳ್ಳುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ನಾವು ಕೇಂದ್ರದೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳಲು ಮನವಿ ಮಾಡಿದರೂ ಸ್ಪಂದಿಸದ ಕಾರಣ ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದೇವೆ ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.