ಬೆಂಗಳೂರು : ಬರಪೀಡಿತ ಪ್ರದೇಶಗಳ ರೈತರಿಗೆ ತಲಾ 5,000 ರೂಪಾಯಿಗಳ ಪರಿಹಾರವನ್ನು ಎರಡು ಕಂತುಗಳಲ್ಲೂ ಡಿಸೆಂಬರ್ 1ರೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್‌ ತಿಳಿಸಿದರು.

ಇಂದು ವಿಕಾಸಸೌಧದಲ್ಲಿ‌ ಜಿಲ್ಲಾಧಿಕಾರಿಗಳು, ಡಿಡಿಎಲ್‌ಆರ್‌ಗಳು, ಉಪ ವಿಭಾಗಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೋಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಡಿಸೆಂಬರ್ 1ರೊಳಗೆ ರೈತರಿಗೆ ನೀಡುವ ಪರಿಹಾರವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಗ್ರೀನ್ ಲಿಸ್ಟ್‌ನಲ್ಲಿರುವ ಎಲ್ಲಾ ರೈತರಿಗೆ ಎರಡೂ ಕಂತುಗಳು ಡಿಸೆಂಬರ್ 1ರೊಳಗೆ ಖಾತೆಗೆ ತಲುಪಲಿವೆ ಎಂದು ಅವರು ಸ್ಪಷ್ಟಪಡಿಸಿದರು. ಈ ಕುರಿತು ಕೆಲವು ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಉಂಟಾಗಿದ್ದ ಗೊಂದಲವನ್ನು ಈಗ ಪೂರ್ಣವಾಗಿ ನಿವಾರಿಸಲಾಗಿದೆ ಎಂದರು.

 “ಬರ ಪರಿಹಾರಕ್ಕಾಗಿ ಕೇಂದ್ರದಿಂದ 22,400.58 ಕೋಟಿ ರೂಪಾಯಿಗಳನ್ನು ಕೇಳಿದ್ದೇವೆ. ಇದಕ್ಕೆ ಇಲ್ಲಿಯ ತನಕ ಪ್ರತಿಕ್ರಿಯೆಯೇ ಬಂದಿಲ್ಲ. ಕೃಷಿ ಸಚಿವರು, ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ಸಮಯ ಕೋರಿ ಪತ್ರ ಬರೆದಿದ್ದರೂ ಉತ್ತರ ಬಂದಿಲ್ಲ. ಇದು ಒಕ್ಕೂಟ ಸರ್ಕಾರಕ್ಕೆ ಭೂಷಣವಲ್ಲ. ಆದರೆ ನಾವು ಪ್ರಯತ್ನಗಳನ್ನು ನಿಲ್ಲಿಸಿಲ್ಲ” ಎಂದು ಅವರು ಹೇಳಿದರು.

ರಾಜ್ಯದಲ್ಲಿ 57.93 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಬೆಳೆ ನಷ್ಟವಾಗಿದ್ದು, ಒಟ್ಟು ನಷ್ಟದ ಪ್ರಮಾಣ 62,481.88 ಕೋಟಿ ರೂಪಾಯಿಗಳಷ್ಟಿದೆ ಎಂದು ಅವರು ಮಾಹಿತಿ ನೀಡಿದರು. “ಕೇಂದ್ರದ ನೆರವು ಬಾರಲಿಲ್ಲ ಎಂದು ನಾವು ಸುಮ್ಮನಿರಲು ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ ರೈತರಿಗೆ ತಲಾ 5,000 ರೂಪಾಯಿಗಳ ಪರಿಹಾರವನ್ನು ಎರಡು ಹಂತದಲ್ಲಿ ಕೊಡುವುದಾಗಿ ಘೋಷಿಸಿದ್ದೆವು” ಎಂದರು.

ಕುಡಿಯುವ ನೀರಿಗೆ ಹೆಚ್ಚುವರಿ ಅನುದಾನ:

ಕುಡಿಯುವ ನೀರಿಗಾಗಿ ಪ್ರತೀ ಕ್ಷೇತ್ರಕ್ಕೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ; ಅಗತ್ಯವಿದ್ದರೆ ಇನ್ನೂ ಒಂದು ಕೋಟಿ ನೀಡಲು ಸರ್ಕಾರ ಸಿದ್ಧವಿದೆ. ಎಸ್‌ಡಿ‌ಆರ್‌ಎಫ್‌ನಲ್ಲಿ ಜಿಲ್ಲಾಧಿಕಾರಿಗಳ ಬಳಿಯೇ ಸುಮಾರು 379 ಕೋಟಿ ರೂಪಾಯಿ ಲಭ್ಯವಿದ್ದು, ಅದನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಹೊಸ ಕೊಳವೆ ಬಾವಿಗಳನ್ನು ಕೊರೆಯುವುದಷ್ಟೇ ಅಲ್ಲದೆ ಹಳೆಯ ಕೊಳವೆ ಬಾವಿಗಳ ನವೀಕರಣ ಮತ್ತು ಶುದ್ಧೀಕರಣಕ್ಕೂ ಸೂಚನೆ ನೀಡಲಾಗಿದೆ ಎಂದರು.

ಮೇವಿಗೆ ಹೆಚ್ಚುವರಿ 33 ಕೋಟಿ

“ಜಾನುವಾರುಗಳಿಗೆ ಮೇವಿನ ಕೊರತೆ ಬರಬಾರದೆಂದು ಈಗಾಗಲೇ 26 ಕೋಟಿ ರೂಪಾಯಿ ವೆಚ್ಚದಲ್ಲಿ ಮೇವಿನ ಕಿಟ್‌ಗಳನ್ನು ವಿತರಿಸಿದ್ದೆವು. ಈಗ ಹೆಚ್ಚುವರಿಯಾಗಿ 33 ಕೋಟಿ ರೂಪಾಯಿಗಳನ್ನು ಮೇವಿನ ಕಿಟ್ ಮತ್ತು ಮೇವು ಖರೀದಿಗಾಗಿ ಸರ್ಕಾರ ನೀಡುತ್ತಿದೆ” ಎಂದು ಅವರು ತಿಳಿಸಿದರು.

ಹೀಟ್ ವೇವ್‌ಗೆ ಮುಂಜಾಗ್ರತೆ:

ಈ ಬಾರಿಯ ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗಿ ಹೀಟ್ ವೇವ್ ಬರುವ ಸಾಧ್ಯತೆ ಇರುವುದರಿಂದ ಅದನ್ನು ನಿರ್ವಹಿಸಲು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಪಿಂಚಣಿ: ಡಿ.1ರೊಳಗೆ ಎಲ್ಲಾ ಅರ್ಹರಿಗೆ ತಲುಪಬೇಕು

ವ್ರದ್ಧಾಪ್ಯ, ವಿಧವಾ ಮತ್ತು ವಿಶೇಷ ಚೇತನರ ಪಿಂಚಣಿದಾರರ ಸಂಖ್ಯೆ 83,14,710. ಇವರಲ್ಲಿ 73,47,739 ಮಂದಿಗೆ ಪಿಂಚಣಿ ಸಂದಾಯವಾಗುತ್ತಿದೆ. ಪರಿಶೀಲನೆಯ ಸಂದರ್ಭದಲ್ಲಿ 6,59,778 ಮಂದಿ ಅನರ್ಹರೆಂದು ತಿಳಿದುಬಂದಿದ್ದರಿಂದ ಅವುಗಳನ್ನು ರದ್ದುಪಡಿಸಲಾಗಿದೆ. ಇನ್ನೂ 3,07,193 ಪ್ರಕರಣಗಳ ಅರ್ಹತೆಯ ಕುರಿತು ತೀರ್ಮಾನವಾಗಬೇಕಿದ್ದು, ಇವುಗಳನ್ನು ಈ ತಿಂಗಳ ಕೊನೆಯೊಳಗಾಗಿ ಪರಿಹರಿಸಲು ಸೂಚಿಸಲಾಗಿದೆ. ಡಿಸೆಂಬರ್ 1ರೊಳಗೆ ಪ್ರತಿಯೊಬ್ಬ ಅರ್ಹ ಪಿಂಚಣಿ ಫಲಾನುಭವಿಗೂ ಪಿಂಚಣಿ ತಲುಪುವುದು ಕಡ್ಡಾಯ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ನಿವೇಶನ ಯೋಜನೆ: ಮೊದಲ ಹಂತದಲ್ಲಿ 5 ಲಕ್ಷ ನಿವೇಶನ

“ರಾಜ್ಯದ ಅನೇಕ ಬಡವರು ಶಾಶ್ವತವಾಗಿ ಒಂದು ವಿಳಾಸವೂ ಇಲ್ಲದಂತೆ ಕೊನೆಯುಸಿರೆಳೆದಿದ್ದಾರೆ. ಈ ಸ್ಥಿತಿ ಮುಂದುವರಿಯಬಾರದು ಎಂಬ ಕಾರಣಕ್ಕೆ ಸರ್ಕಾರ ನಿವೇಶನ ಯೋಜನೆಯನ್ನು ರೂಪಿಸಿದೆ. ಕನಿಷ್ಠ ಒಂದು ನಿವೇಶನವಿದ್ದರೆ ಈ ಕುಟುಂಬಗಳಲ್ಲಿ ಒಂದು ಭರವಸೆ ಹುಟ್ಟುತ್ತದೆ” ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ಮೊದಲ ಹಂತದಲ್ಲಿ ರಾಜ್ಯವ್ಯಾಪಿಯಾಗಿ 5 ಲಕ್ಷ ನಿವೇಶನಗಳನ್ನು ವಿತರಿಸಲಾಗುತ್ತದೆ. ಈ ಹಂತದಲ್ಲಿ ಗ್ರಾಮೀಣ ಪ್ರದೇಶಕ್ಕೆ ಮೊದಲ ಆದ್ಯತೆ. ಭೂಮಿ ಗುರುತಿಸುವ ಮತ್ತು ನಿವೇಶನ ನಿರ್ಮಾಣದ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದೊಳಗೆ ಮುಗಿಸಬೇಕು; ವಿತರಣೆ ಮುಂದಿನ ವರ್ಷದ ಜನವರಿಯಲ್ಲಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ಭೂಸುರಕ್ಷಾ: ಆರು ತಿಂಗಳಲ್ಲಿ ಬಾಕಿ ದಾಖಲೆ ಡಿಜಿಟೈಸೇಶನ್

ಭೂಸುರಕ್ಷಾ ಯೋಜನೆಯಡಿ ಒಟ್ಟು 136.26 ಕೋಟಿ ಪುಟಗಳ ದಾಖಲೆಗಳಿದ್ದು, ಇಲ್ಲಿಯ ತನಕ 104.33 ಕೋಟಿ ಪುಟಗಳನ್ನು ಡಿಜಿಟೈಸ್ ಮಾಡಲಾಗಿದೆ. ಬಾಕಿ ಉಳಿದಿರುವ 31.92 ಕೋಟಿ ಪುಟಗಳ ಡಿಜಿಟೈಸೇಶನ್‌ಅನ್ನು ಮುಂದಿನ ಆರು ತಿಂಗಳೊಳಗೆ ಮುಗಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

“ಭೂ ದಾಖಲೆಗಳ ಸುರಕ್ಷತೆಗೆ ಸಂಬಂಧಿಸಿದಂತೆ ಇದು ಬಹುಮುಖ್ಯ ಯೋಜನೆ. ಇದರಲ್ಲಿ ವಿಳಂಬವಾಗುವುದನ್ನು ಸಹಿಸಿಕೊಳ್ಳಲಾಗುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು. ಗುರಿ ತಲುಪಲು ಬೇಕಿರುವ ಎಲ್ಲಾ ನೆರವನ್ನೂ ಇಲಾಖೆ ನೀಡಲಿದೆ; ಹಿರಿಯ ಅಧಿಕಾರಿಗಳು ನಿಯತವಾಗಿ ಪ್ರಗತಿ ಪರಿಶೀಲಿಸಲಿದ್ದಾರೆ ಎಂದರು.

ನಮೂನೆ 16 ಎ: ರೈತರಿಗೆ ಹೋಸ ಮಾದರಿಯ ಸಮಗ್ರ ಪಹಣಿ

ರೈತರಿಗೆ ಸಿಗಲಿರುವ ಹೋಸ ಮಾದರಿಯ ಪಹಣಿ “ನಮೂನೆ 16 ಎ” ಕುರಿತು ವಿವರಿಸಿದ ಅವರು, ಇದು ಭೂಮಿಗೆ ಸಂಬಂಧಿಸಿದಂತೆ ಒಂದು ಸಮಗ್ರ ದಾಖಲೆಯಾಗಿದೆ ಎಂದರು. ಇದರಲ್ಲಿ ರೈತನ ಫೋಟೋ, ನಕ್ಷೆ, ಇ.ಸಿ., ಆಕಾರ್ ಬಂಧ್ ವಿವರಗಳು ಸೇರಿದಂತೆ ಭೂಮಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯ ಕ್ಯೂಆರ್ ಕೋಡ್ ಒಂದೇ ದಾಖಲೆಯಲ್ಲಿ ಇರುತ್ತದೆ. ರಾಜ್ಯದಲ್ಲಿ 2.1 ಕೋಟಿಗೂ ಅಧಿಕ ಪಹಣಿಗಳಿವೆ. ಸದ್ಯ 9.59 ಲಕ್ಷ 16ಎ ಪಹಣಿಗಳು ಸಿದ್ಧಗೊಂಡಿವೆ. ಮುಂದಿನ ಮೂರು ತಿಂಗಳಲ್ಲಿ ಕನಿಷ್ಠ 1 ಕೋಟಿ ಪಹಣಿಗಳು 16 ಎ ವ್ಯಾಪ್ತಿಗೆ ಬರಬೇಕು ಎಂದು ಗುರಿ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಂದಾಯ ನ್ಯಾಯಾಲಯಗಳಿಗೆ ಕಾಲಮಿತಿ; 

ತಹಶೀಲ್ದಾರ್ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣ ಗರಿಷ್ಠ 90 ದಿನಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿಯುವಂತಿಲ್ಲ; ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಗರಿಷ್ಠ ಆರು ತಿಂಗಳಿಗಿಂತ ಹೆಚ್ಚು ಕಾಲ ಬಾಕಿ ಇರುವಂತಿಲ್ಲ. ಈ ಕಾಲಮಿತಿಯನ್ನು ಯಾವುದೇ ಅಧಿಕಾರಿ ಮೀರುವಂತಿಲ್ಲ ಮತ್ತು ಇದನ್ನು ಖಾತರಿಪಡಿಸಿಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಕಂದಾಯ ಇಲಾಖೆ ಒದಗಿಸುವ ಎಲ್ಲಾ ಸೇವೆಗಳ ಗುಣಮಟ್ಟದ ಮೇಲೆ ನಿಗಾ ಇರಿಸಲು ಉಪ ಮುಖ್ಯಮಂತ್ರಿಗಳ ಡ್ಯಾಶ್‌ಬೋರ್ಡ್ ರೂಪಿಸಲು ಸೂಚಿಸಲಾಗಿದೆ. “ಪ್ರತೀ ಎರಡು ದಿನಗಳಿಗೊಮ್ಮೆ ನಾನೇ ಇದನ್ನು ಪರಿಶೀಲಿಸಲಿದ್ದೇನೆ” ಎಂದು ಅವರು ಹೇಳಿದರು.

ಭಾರತ್ ಜೋಡೋ ಯುವ ಸಂಘ: 10,000 ಸಂಘ, ಡಿಸೆಂಬರ್‌ನಿಂದ ಕಾರ್ಯಾರಂಭ

ರಾಜ್ಯವ್ಯಾಪಿಯಾಗಿ 10,000 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಒಂದು ವಾರದಲ್ಲಿ ಇವುಗಳ ನೋಂದಣಿಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಬೇಕು ಮತ್ತು ಡಿಸೆಂಬರ್ ಮೊದಲ ವಾರದಿಂದ ಸಂಘಗಳು ಅಧಿಕೃತವಾಗಿ ಕಾರ್ಯನಿರ್ವಹಿಸಲು ಆರಂಭಿಸಬೇಕು ಎಂದು ಸೂಚಿಸಲಾಗಿದೆ ಎಂದು ಪರಮೇಶ್ವರ ತಿಳಿಸಿದರು.

ಸಭೆಯಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಕೃಷಿ ಇಲಾಖೆಯ ಕಾರ್ಯದರ್ಶಿ ತ್ರಿಲೋಕ್‌ಚಂದ್ರ, ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಭೂಮಾಪನ‌ ಮತ್ತು ಭೂದಾಲೆಗಳ ಆಯುಕ್ತರಾದ ರಾಕೇಶ್ ಕುಮಾರ್, ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಆಯುಕ್ತೆ ಹೊನ್ನಾಂಬ, ಯುವಜನಸೇವಾ ಮತ್ತು ಕ್ರೀಡಾ ಆಯುಕ್ತರಾದ ಎಂ.ಎನ್.ಅನುಚೇತ್ ಅವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಮೀರ್ ದಳಸನೂರು\ವಾರ್ತಾಭಾರತಿ

ಬೆಂಗಳೂರು ವರದಿಗಾರರು

ಸಮೀರ್ ದಳಸನೂರು ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿ ಪಡೆದಿದ್ದು, ದೂರದರ್ಶನದ ಚಂದನ ವಾಹಿನಿಯಲ್ಲಿ ಅರೆಕಾಲಿಕ ಸಹಾಯಕ ಸುದ್ದಿ ಸಂಪಾದಕರಾಗಿ, ಆಕಾಶವಾಣಿಯಲ್ಲೂ ಅರೆಕಾಲಿಕ ಸುದ್ದಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಇದೆ. ಪ್ರಸ್ತುತ ಹಲವು ವರ್ಷಗಳಿಂದ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವಾಸಿ ಅನುಭವದ ವಿಶೇಷ ಲೇಖನಗಳನ್ನು ಬರೆಯುವುದು, ಪುಸ್ತಕ ಓದುವುದು, ಸಾಮಾಜಿಕ ಸೇವಾ ಕಾರ್ಯಗಳು ಇವರ ಹವ್ಯಾಸವಾಗಿವೆ.