ಮೋದಿ ಸರ್ಕಾರದ ವಿದೇಶಾಂಗ ನೀತಿ ಟೀಕಿಸಿದ ಪೋಸ್ಟ್ಗೆ ಕಾನೂನು ಉಲ್ಲಂಘನೆ ಆರೋಪ: ಚಿಂತಕ ಶಿವಸುಂದರ್ ಖಾತೆಗೆ ಉತ್ತರಾಖಂಡ ಪೊಲೀಸರ ನೋಟಿಸ್
ಬೆಂಗಳೂರು: ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶಿವಸುಂದರ್ ಅವರು ಪ್ರಕಟಿಸಿದ ಪೋಸ್ಟ್ ಒಂದು ಭಾರತೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಉತ್ತರಾಖಂಡ ಪೊಲೀಸರು ‘ಎಕ್ಸ್’ ಸಂಸ್ಥೆಗೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಖ್ಯಾತ ಚಿಂತಕ, ಅಂಕಣಕಾರ ಹಾಗೂ @ShivasundarShi1 ಖಾತೆದಾರರಾದ ಶಿವಸುಂದರ್ ಅವರಿಗೆ ‘ಎಕ್ಸ್’ ಅಧಿಕೃತವಾಗಿ ಮಾಹಿತಿ ನೀಡಿದೆ.
ಅಕ್ಟೋಬರ್ 23, 2026ರಂದು ಬೆಳಗ್ಗೆ 9:39ಕ್ಕೆ ಶಿವಸುಂದರ್ ಅವರು ತಮ್ಮ ಖಾತೆಯಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದರು. "ವಿರೋಧ ಪಕ್ಷಗಳಿಗೆ ವಿದೇಶಿ ನಂಟು ಇದೆಯೇ ಇಲ್ಲವೇ ಗೊತ್ತಿಲ್ಲ, ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅಮೆರಿಕದೊಂದಿಗೆ ಗುಲಾಮಗಿರಿ ಸಂಬಂಧವನ್ನು ಮತ್ತು ಘೋಷಿತ ಯುದ್ಧ ಅಪರಾಧಿ ನೆತನ್ಯಾಹು ಅವರೊಂದಿಗೆ ರಾಜಿ ಸಂಬಂಧವನ್ನು ಹೊಂದಿದೆ ಎಂಬುದು ನಿರ್ವಿವಾದಿತ ಸತ್ಯ" ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು.
ಈ ಪೋಸ್ಟ್ ಭಾರತೀಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಉತ್ತರಾಖಂಡ ಪೊಲೀಸರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಸ್ಟ್ ತೆರವುಗೊಳಿಸುವಂತೆ ಕಾನೂನು ಜಾರಿ ಸಂಸ್ಥೆಯಿಂದ ಮನವಿ ಬಂದಿರುವುದಾಗಿ ‘ಎಕ್ಸ್’ ಸಂಸ್ಥೆಯು ಬಳಕೆದಾರರಿಗೆ ತಿಳಿಸಿದೆ ಎಂದು ಅವರು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.
ಬಳಕೆದಾರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಗೌರವಿಸುವ ನೀತಿಯ ಭಾಗವಾಗಿ, ಸರ್ಕಾರಿ ಅಥವಾ ಕಾನೂನು ಜಾರಿ ಸಂಸ್ಥೆಗಳಿಂದ ವಿಷಯವನ್ನು ತೆಗೆದುಹಾಕುವಂತೆ ಮನವಿ ಬಂದಾಗ ಬಳಕೆದಾರರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ ಎಂದು ‘ಎಕ್ಸ್’ ಸ್ಪಷ್ಟಪಡಿಸಿದೆ. ಬಳಕೆದಾರರು ಮನವಿ ಬಂದ ದೇಶದಲ್ಲಿ ವಾಸಿಸುತ್ತಿರಲಿ ಅಥವಾ ಇಲ್ಲದಿರಲಿ ಈ ನೋಟಿಸ್ ನೀಡಲಾಗುತ್ತದೆ.
ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡುವುದು ಈ ಸೂಚನೆಯ ಉದ್ದೇಶವಾಗಿದೆ ಎಂದು ಸಂಸ್ಥೆ ಹೇಳಿದೆ. ಈ ನಿಟ್ಟಿನಲ್ಲಿ ಕಾನೂನು ಸಲಹೆ ಪಡೆಯುವುದು, ನ್ಯಾಯಾಲಯದಲ್ಲಿ ಪೊಲೀಸರ ಮನವಿಯನ್ನು ಪ್ರಶ್ನಿಸುವುದು, ಸಂಬಂಧಪಟ್ಟ ನಾಗರಿಕ ಸಮಾಜದ ಸಂಘಟನೆಗಳನ್ನು ಸಂಪರ್ಕಿಸುವುದು ಅಥವಾ ಸ್ವಯಂಪ್ರೇರಿತವಾಗಿ ಪೋಸ್ಟ್ ಅನ್ನು ಅಳಿಸಿಹಾಕುವ ಆಯ್ಕೆಗಳು ಬಳಕೆದಾರರ ಮುಂದಿವೆ.