ರೈತರಿಗೆ ಕ್ಯೂಆರ್ ಕೋಡ್ ಇರುವ ಹೊಸ ಪಹಣಿ
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಕಂದಾಯ ಇಲಾಖೆಯಡಿ ರೈತರಿಗೆ ದೊರೆಯುವ ಭೂ ದಾಖಲೆ ಗುರುತಿಸುವ ‘ನಮೂನೆ 16 ಎ’ ಪಹಣಿ ಬದಲಾವಣೆಗೆ ರಾಜ್ಯ ಸರಕಾರ ಮುಂದಾಗಿದ್ದು, ಕ್ಯೂಆರ್ ಕೋಡ್ ಸೇರಿದಂತೆ ಹೊಸ ಮಾಹಿತಿಯುಳ್ಳ ನೂತನ ಪಹಣಿ ಸಿದ್ಧಪಡಿಸಲಾಗಿದೆ.
ಶುಕ್ರವಾರ ವಿಕಾಸಸೌಧದಲ್ಲಿ ಕಂದಾಯ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು, ಡಿಡಿಎಲ್‍ಆರ್‍ಗಳು, ಉಪ ವಿಭಾಗಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರೈತರಿಗೆ ಸಿಗಲಿರುವ ಹೊಸ ಮಾದರಿಯ ಪಹಣಿ “ನಮೂನೆ 16 ಎ” ಕುರಿತು ಚರ್ಚೆ ನಡೆಸಲಾಯಿತು.
ಇದು ಭೂಮಿಗೆ ಸಂಬಂಧಿಸಿದಂತೆ ಒಂದು ಸಮಗ್ರ ದಾಖಲೆಯಾಗಿದೆ. ಇದರಲ್ಲಿ ರೈತನ ಫೋಟೋ, ನಕ್ಷೆ, ಇ.ಸಿ., ಆಕಾರ್ ಬಂದ್ ವಿವರಗಳು ಸೇರಿದಂತೆ ಭೂಮಿಗೆ ಸಂಬಂಧಿಸಿದ ಎಲ್ಲ್ಲ ಮಾಹಿತಿಯ ಕ್ಯೂಆರ್ ಕೋಡ್ ಒಂದೇ ದಾಖಲೆಯಲ್ಲಿ ಇರುತ್ತದೆ. ರಾಜ್ಯದಲ್ಲಿ 2.1 ಕೋಟಿಗೂ ಅಧಿಕ ಪಹಣಿಗಳಿವೆ. ಸದ್ಯ 9.59 ಲಕ್ಷ 16ಎ ಪಹಣಿಗಳು ಸಿದ್ಧಗೊಂಡಿವೆ. ಮುಂದಿನ ಮೂರು ತಿಂಗಳಲ್ಲಿ ಕನಿಷ್ಠ 1 ಕೋಟಿ ಪಹಣಿಗಳು 16 ಎ ವ್ಯಾಪ್ತಿಗೆ ಬರಬೇಕು ಎಂದು ಗುರಿ ನಿಗದಿಪಡಿಸಲಾಗಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.
ಜತೆಗೆ, ಭೂಸುರಕ್ಷಾ ಯೋಜನೆಯಡಿ ಒಟ್ಟು 136.26 ಕೋಟಿ ಪುಟಗಳ ದಾಖಲೆಗಳಿದ್ದು, ಇಲ್ಲಿಯ ತನಕ 104.33 ಕೋಟಿ ಪುಟಗಳನ್ನು ಡಿಜಿಟಿಲೀಕರಣ ಮಾಡಲಾಗಿದೆ. ಬಾಕಿ ಉಳಿದಿರುವ 31.92 ಕೋಟಿ ಪುಟಗಳ ಡಿಜಿಟಿಲೀಕರಣ ಅನ್ನು ಮುಂದಿನ ಆರು ತಿಂಗಳೊಳಗೆ ಮುಗಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ರಾಜ್ಯದಲ್ಲಿ 10.71 ಲಕ್ಷ ದರಖಾಸ್ತು ಪೋಡಿ ಪ್ರಕರಣಗಳು ವಿವಿಧ ಹಂತಗಳಲ್ಲಿ ಬಾಕಿ ಇವೆ. ಇಂದಿನಿಂದ ಪ್ರತಿ ತಾಲ್ಲೂಕಿನಲ್ಲಿ ಪ್ರತಿ ದಿನ 15 ದರಖಾಸ್ತು ಪೋಡಿಗಳನ್ನು ಮಾಡಿ 15 ಪಹಣಿಗಳನ್ನು ಸ್ರುಜಿಸಬೇಕು. ಈ ಮೂಲಕ ಒಂದು ವರ್ಷದಲ್ಲಿ ಎಲ್ಲ ಪೋಡಿ ಪ್ರಕರಣಗಳನ್ನು ಮುಕ್ತಾಯಗೊಳಿಸಬೇಕು ಎಂದು ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ ಖರೀದಿಸಿ ಇಡಲಾಗಿರುವ ರೋವರ್‍ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪೋಡಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಾಕೀತು ಮಾಡಿರುವುದಾಗಿ ಅವರು ಹೇಳಿದರು.