Photo credit: X/@DKShivakumar

ಬೆಂಗಳೂರು: ಪೌರಕಾರ್ಮಿಕರ ಭತ್ಯೆ ಏರಿಕೆ, ಉಪಹಾರ ಭತ್ಯೆಯನ್ನು 35ರಿಂದ 70 ರೂ.ಗೆ ಏರಿಕೆ ಮಾಡಿ ಶೀಘ್ರದಲ್ಲಿಯೇ ಆದೇಶ ಹೊರಡಿಸುವುದರ ಜತೆಗೆ, ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಸಂಪುಟ ಉಪಸಮಿತಿ ರಚಿಸಿ, ಆರ್ಥಿಕ ಇಲಾಖೆ ಸಮ್ಮತಿ ಪಡೆದು ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ.

ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ಸ್ವಚ್ಚತಾ ಯೋಧರಿಗೆ ನಲ್ಮೆಯ ನಮನ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ-2026 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಕಾರಣಕ್ಕೆ ನಾವು ‘ಪ್ರಜಾಸೇವೆ ಇಲಾಖೆ’ ಆರಂಭಿಸಿದ್ದೇವೆ.

ಯಾವ ಸಂಘಟನೆಯ ಮಧ್ಯವರ್ತಿಗಳು ಅಗತ್ಯವಿಲ್ಲ. ಪೌರಕಾರ್ಮಿಕರ ಸಮಸ್ಯೆಗಳನ್ನು ಸಚಿವರಿಗೆ ತಿಳಿಸಿ. ಜತೆಗೆ, ನಿಮ್ಮ ಮಂಡಳಿ, ಯೋಗ ಕ್ಷೇಮ, ಕಲ್ಯಾಣ ನಿಧಿ ವಿಚಾರದಲ್ಲಿ ನಾನು ಗಮನಹರಿಸಬೇಕಾಗಿದ್ದು, ಇದಕ್ಕಾಗಿ ಸಮಾಜಕಲ್ಯಾಣ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಸಚಿವ ಬಸವಂತಪ್ಪರನ್ನು ಒಳಗೊಂಡಂತೆ ಸಂಪುಟ ಉಪಸಮಿತಿ ರಚಿಸಿ, ಆರ್ಥಿಕ ಇಲಾಖೆ ವಿಶ್ವಾಸ ಪಡೆದು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಪ್ರತಿನಿತ್ಯ ನಿಮಗೆ ನೀಡುವ ಜವಾಬ್ದಾರಿಯಲ್ಲಿ ಶೇ.60ರಷ್ಟು ಜನ ಪ್ರಾಮಾಣಿಕವಾಗಿ ಮಾಡುತ್ತೀರಿ. ಉಳಿದಷ್ಟು ಜನ ಮೈಗಳ್ಳರು, ಮಹಿಳೆಯರ ಮೇಲೆ ದರ್ಪ ತೋರುವವರು ನಿಮ್ಮಲ್ಲೇ ಇದ್ದಾರೆ. ಇದರ ಬಗ್ಗೆ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುವುದು. ನೀವುಗಳು ಇಲ್ಲದಿದ್ದರೆ ನಗರ ತಿಪ್ಪೆಗುಂಡಿಯಾಗುತ್ತದೆ ಎಂಬ ಅರಿವಿದೆ. ನೀವಿದ್ದರೆ ರಸ್ತೆ, ನಗರ ಎಲ್ಲವೂ ಸುಂದರ. ಹೀಗಾಗಿ ನಿಮ್ಮನ್ನು ಸ್ವಚ್ಛತೆಯ ರಾಯಭಾರಿಗಳು ಎಂದು ಗೌರವಯುತವಾಗಿ ಕಾಣುತ್ತಿದೆ. ನಿಮ್ಮ ಆರೋಗ್ಯಕ್ಕೆ ಗ್ಯಾರಂಟಿ ನೀಡುವುದು ನಮ್ಮ ಬದ್ಧತೆಯಾಗಿದೆ. ಸಮಾಜ ನಿಮ್ಮ ಮೇಲೆ ಅವಲಂಬಿತವಾಗಿದೆ. ನಿಮ್ಮ ಕೆಲಸ ದೇವರ ಸೇವೆಗೆ ಸಮಾನ ಎಂದು ಅಧಿಕಾರಿಗಳು ಹಾಗೂ ಸಾಮಾನ್ಯ ಜನ ಕಾಣುವಂತಾಗಬೇಕು ಎಂದು ಅವರು ತಿಳಿಸಿದರು.

ನಿಮ್ಮೆಲ್ಲರ ಬದುಕಿನಲ್ಲಿ ನೀವು ಯಾವತ್ತಿಗೂ ಕೀಳರಿಮೆಯಿಂದ ಮಾನಸಿಕವಾಗಿ ಕುಗ್ಗಬಾರದು. ನೀವು ದೇಶಸೇವೆ ಮಾಡುತ್ತಿರುವುದಾಗಿ ಸ್ವಾಭಿಮಾನದಿಂದ ಬದುಕಿ. ಪೌರಕಾರ್ಮಿಕರಿಲ್ಲದೆ ನಾವು ಆರೋಗ್ಯವಾಗಿರಲು ಸಾಧ್ಯವಿಲ್ಲ. ನಮ್ಮ ಸರಕಾರ ಬಂದ ನಂತರ ಏನೇ ಒತ್ತಡವಿದ್ದರೂ ಸಾವಿರಾರು ಜನ ಪೌರಕಾರ್ಮಿಕರನ್ನು ಖಾಯಂ ಮಾಡಿದ್ದು, ಉಳಿದವರನ್ನು ಖಾಯಂ ಮಾಡಲಾಗುವುದು. ಜಲಮಂಡಳಿ, ನೀರು ಸರಬರಾಜು ಇಲಾಖೆಗಳಲ್ಲಿ ಖಾಯಂ ಆಗಿ ಸ್ವಾಭಿಮಾನದ ಬದುಕು ನೀಡಲು ಕಾಂಗ್ರೆಸ್ ಸರಕಾರ ಬದ್ಧವಾಗಿದೆ ಎಂದರು.

ಶಾಲೆಗಳ ನಿರ್ಮಾಣ: ನಿಮ್ಮ ಮಕ್ಕಳಿಗಾಗಿ ನಗರ ಪ್ರದೇಶಗಳಲ್ಲಿ ಕೆಪಿಎಸ್ ಮಾದರಿಯ ವಸತಿ ಶಾಲೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿದೆ. ನಿಮ್ಮ ಮಕ್ಕಳು ಓದಿ, ನಾಯಕರಾಗಿ ಬೆಳೆದು, ಹೊಸ ಉದ್ಯೋಗಗಳನ್ನು ಸೃಷ್ಟಿಸುವಂತಾಗಬೇಕು. ನಿಮ್ಮ ಮಕ್ಕಳು ಐಎಎಸ್ ಹಾಗೂ ಕೆಎಎಸ್ ಆಗಬೇಕು ಎಂಬುದು ನಮ್ಮ ಚಿಂತನೆ. ಈ ಸಂಬಂಧ ಸಚಿವರೊಂದಿಗೆ ಚರ್ಚೆ ಮಾಡಲಾಗುವುದು. ನಿಮಗಾಗಿ ಪ್ರತ್ಯೇಕ ಭವನ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು, ಇದನ್ನು ನಿರ್ಮಾಣ ಮಾಡುವ ಜಾಗ ನನ್ನ ತಲೆಯಲ್ಲಿದೆ. ಮುಂದಿನ ಎರಡು ತಿಂಗಳಲ್ಲಿ ಪೌರ ಭವನ ನಿರ್ಮಾಣ ಪ್ರಾರಂಭಿಸಲಾಗುವುದು. ಪ್ರತಿ ವರ್ಷ ಪೌರ ಕಾರ್ಮಿಕ ದಿನ ಕಾರ್ಯಕ್ರಮವನ್ನು ಸರಕಾರದಿಂದ ನಡೆಸಲಾಗುವುದು ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಎಚ್.ಸಿ.ಬಾಲಕೃಷ್ಣ, ಡಾ.ಯತೀಂದ್ರ, ಕೆ.ಎಸ್. ಬಸವಂತಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಶೋಕ್ ಸಾಲಪ್ಪ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ, ಪೌರಕಾರ್ಮಿಕ ಅಭಿವೃದ್ಧಿ ಸಂಘದ ಅಧ್ಯಕ್ಷೆ ಶೈಲಾ, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ್ ಸೇರಿದಂತೆ ಪ್ರಮುಖರಿದ್ದರು.

ಪೌರಕಾರ್ಮಿಕರ ಸಮವಸ್ತ್ರ ಧರಿಸಿ, ಧೈರ್ಯ ತುಂಬಿದ ಸಿಎಂ!

ಪೌರಕಾರ್ಮಿಕ ಮಹಿಳೆಯ ಮಗಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ಆಕೆಯನ್ನು ಶಾಲೆಗೆ ಬಿಡಲು ಹೋದಾಗ ಅಲ್ಲಿನ ಶಾಲಾ ಸಹಪಾಠಿಗಳು ನಿಮ್ಮ ತಾಯಿ ಪಾಲಿಕೆ ಸಮವಸ್ತ್ರ ಧರಿಸಿ ಬಂದಿದ್ದು, ಇದರಲ್ಲಿ ವಾಸನೆ ಇದೆ. ದೂರ ಇರುವಂತೆ ನಿಂದಿದ್ದರು. ಈ ಸಂಬಂಧ ಪೌರ ಕಾರ್ಮಿಕರೊಬ್ಬರು ಅಳಲು ತೋಡಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ಸ್ವಚ್ಚತಾ ಯೋಧರಿಗೆ ನಲ್ಮೆಯ ನಮನ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ-2026 ಸಮಾರಂಭದ ಕೊನೆಯವರೆಗೂ ಪೌರ ಕಾರ್ಮಿಕರ ಸಮವಸ್ತ್ರ ಧರಿಸಿದ್ದರು.

ಅಷ್ಟೇ ಅಲ್ಲದೆ, ಪೌರಕಾರ್ಮಿಕರ ಜತೆ ಊಟ ಮಾಡಿ ‘ಶ್ರಮದಲ್ಲೇ ಶಿವನನ್ನು ಕಾಣುವ ನಿತ್ಯ ನೈರ್ಮಲ್ಯಗಾರರು ಪೌರ ಕಾರ್ಮಿಕರು. ಇವರು ನಿಜವಾದ ಕರ್ಮಯೋಗಿ, ಕಾಯಕಜೀವಿಗಳು, ಸ್ವಚ್ಛತೆ ಕ್ರಾಂತಿಯ ಸರದಾರರು’ ಎಂದು ಉಲ್ಲೇಖಿಸಿ ಅವರಿಗೆ ಧೈರ್ಯ ತುಂಬಿದ ದೃಶ್ಯ ಕಂಡಿತು.

ದೇವಾಲಯದೊಳಗೆ ನಿರ್ಬಂಧ ಇತ್ತು. ಈಗ ಸಚಿವರು!

ನಿಮ್ಮ ಪೌರಕಾರ್ಮಿಕನ ಮಗನನ್ನು ಭಗವಂತನ ಸೇವೆ ಮಾಡುವ ಮುಜರಾಯಿ ಇಲಾಖೆ ಸಚಿವರನ್ನಾಗಿ ಮಾಡಿ. ಸರ್ವರಿಗೂ ಸಮಬಾಳು, ಸಮ ಪಾಲು ಎಂಬ ತತ್ವವನ್ನು ಪಾಲಿಸಿದ್ದೇವೆ. ಒಂದು ಕಾಲದಲ್ಲಿ ದೇವಾಲಯದ ಒಳಗೆ ನಿರ್ಬಂಧ ಹೇರಲಾಗಿತ್ತು. ಅಂತಹ ತಾರತಮ್ಯ ನಿಲ್ಲಬೇಕು ಎಂದು ನಾನು ಪೌರ ಕಾರ್ಮಿಕನ ಮಗನಿಗೆ ಈ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಅವರಿಗೆ ಗೌರವ ಹಾಗೂ ಶಕ್ತಿ ಬರಬೇಕು ಎಂದು ಮೀನುಗಾರಿಕೆ, ಬಂದರು ಸಚಿವಾಲಯವನ್ನು ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor