ಡಾ.ಶರಣಪ್ರಕಾಶ್ ಪಾಟೀಲ್‌

ಕಲಬುರಗಿ: ಸಂವಿಧಾನದ ಅನುಚ್ಛೇದ 371(ಜೆ) ಅಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ ಅನುಷ್ಠಾನದ ಪ್ರಗತಿ ಪರಿಶೀಲನೆಗಾಗಿ ರಚಿಸಲಾಗಿದ್ದ ಸಚಿವ ಸಂಪುಟ ಉಪಸಮಿತಿಯನ್ನು ರಾಜ್ಯ ಸರ್ಕಾರ ಪುನರ್‌ರಚಿಸಿ ಆದೇಶ ಹೊರಡಿಸಿದೆ.

ಪುನರ್‌ರಚಿಸಲಾದ ಉಪಸಮಿತಿಯ ಅಧ್ಯಕ್ಷರಾಗಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರನ್ನು ನೇಮಿಸಲಾಗಿದೆ.

ಉಪಸಮಿತಿಯ ಸದಸ್ಯರಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ.ಖಂಡ್ರೆ, ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ ಹಾಗೂ ಸಣ್ಣ ನೀರಾವರಿ ಮತ್ತು ವಿಜ್ಞಾನ-ತಂತ್ರಜ್ಞಾನ ಸಚಿವ ಡಾ. ಅಜಯ್ ಸಿಂಗ್ ಅವರನ್ನು ನೇಮಿಸಲಾಗಿದೆ.

ಈ ಹಿಂದೆ ಉಪಸಮಿತಿಯ ಅಧ್ಯಕ್ಷರಾಗಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಈ ಬಾರಿ ಸದಸ್ಯರಾಗಿ ಮುಂದುವರಿಸಲಾಗಿದೆ.

371(ಜೆ) ಅಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕೆ ಸಂಬಂಧಿಸಿದ ಆದೇಶಗಳು, ಯೋಜನೆಗಳು ಹಾಗೂ ವಿವಿಧ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಿ, ಅವುಗಳ ಪರಿಣಾಮಕಾರಿ ಜಾರಿಗೆ ಅಗತ್ಯ ಕ್ರಮಗಳನ್ನು ಶಿಫಾರಸು ಮಾಡುವ ಜವಾಬ್ದಾರಿಯನ್ನು ಈ ಉಪಸಮಿತಿ ನಿರ್ವಹಿಸಲಿದೆ.

ಕರ್ನಾಟಕ ಸರ್ಕಾರದ ವ್ಯವಹಾರ ನಿರ್ವಹಣಾ ನಿಯಮಗಳು–1977ರ ನಿಯಮ 13(5) ಹಾಗೂ 2025ರ ಮಾರ್ಚ್ 15ರ ಸುತ್ತೋಲೆಯ ಅನ್ವಯ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಇಲಾಖೆಯು ಸಚಿವ ಸಂಪುಟ ಉಪಸಮಿತಿಗೆ ಅಗತ್ಯ ಆಡಳಿತಾತ್ಮಕ ನೆರವು ನೀಡಲಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ (ಸಚಿವ ಸಂಪುಟ) ಜೆ. ಕುಮಾರಸ್ವಾಮಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor