ಗ್ರಾಮೀಣ ಪ್ರದೇಶದ 50 ಸರಕಾರಿ ಕಾಲೇಜಗಳಲ್ಲಿ 10 ರೂ.ಕೋಟಿ ವೆಚ್ಚದಲ್ಲಿ ಎಐ ಪ್ರಯೋಗಾಲಯ ಸ್ಥಾಪಿಸಲು ಅನುಮೋದನೆ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಶೀಲತೆ ಹೆಚ್ಚಿಸಲು ರಾಜ್ಯದ 2 ಮತ್ತು 3ನೆ ಹಂತದ ನಗರಗಳ 50 ಸರಕಾರಿ ಕಾಲೇಜಗಳಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ(ಎಐ) ಪ್ರಯೋಗಾಲಯಗಳನ್ನು ಸ್ಥಾಪಿಸಲು ರಾಜ್ಯ ಸರಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಮಾಹಿತಿ ನೀಡಿರುವ ಪ್ರಿಯಾಂಕ್ ಖರ್ಗೆ, ರಾಜ್ಯ ಸರಕಾರದ ಪ್ರಸಕ್ತ ಹಣಕಾಸು ವರ್ಷದ ಬಜೆಟ್‍ನಲ್ಲಿ ಘೋಷಿಸಿದಂತೆ, ಗ್ರಾಮೀಣ ಪ್ರದೇಶದ ಯುವಜನರನ್ನು ಅಗತ್ಯ ಕೌಶಲದ ಜೊತೆ ಉದ್ಯೋಗಶೀಲರನ್ನಾಗಿ ಮಾಡಲು ಕೇಂದ್ರ ಸರಕಾರದ ಎಐ ಮಿಷನ್ ಸಹಭಾಗಿತ್ವದಲ್ಲಿ ‘ಎಐ’ ಪ್ರಯೋಗಾಲಯಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಆಯ್ಕೆ ಮಾಡಲಾಗುವ ಶಿಕ್ಷಣ ಸಂಸ್ಥೆ, ಕಾಲೇಜ್‍ಗಳಲ್ಲಿ ಆಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ ಪ್ರಯೋಗಾಲಯಗಳನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ, ಕೌಶಲ ಅಭಿವೃದ್ಧಿ ಮತ್ತು ಹೊಸ ಆವಿಷ್ಕಾರಗಳಿಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಯುವಜನರು ಇತ್ತೀಚಿನ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳಲು ಮತ್ತು ಉದ್ಯೋಗಾರ್ಹತೆ ಹೆಚ್ಚಿಸಿಕೊಳ್ಳಲು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರಕಾರವು ಎಐ ಮಿಷನ್ ಯೋಜನೆಯಡಿ ಪ್ರತಿಯೊಂದು ಪ್ರಯೋಗಾಲಯಕ್ಕೆ 3 ವರ್ಷಗಳ ಅವಧಿಗೆ 68.98 ಲಕ್ಷ ರೂ.ಮೊತ್ತದ ನೆರವು ನೀಡಲಿದೆ. ಈ ಮೊತ್ತವನ್ನು 3 ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದಕ್ಕೆ ಪೂರಕವಾಗಿ ಬಜೆಟ್‍ನಲ್ಲಿ ಘೋಷಿಸಿರುವಂತೆ 10 ಕೋಟಿ ರೂ.ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೊದಲ ವರ್ಷಕ್ಕೆ 6.29 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಕೃತಕ ಬುದ್ಧಿಮತ್ತೆ ದತ್ತಾಂಶ ಪ್ರಯೋಗಾಲಯಗಳನ್ನು ಸ್ಥಾಪಿಸಲು 23 ಶೈಕ್ಷಣಿಕ ಸಂಸ್ಥೆಗಳನ್ನು ಆಯ್ಕೆ ಮಾಡಿರುವುದಕ್ಕೂ ಸರಕಾರದ ಅನುಮೋದನೆ ದೊರೆತಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.