ಧರ್ಮಸ್ಥಳ ಪ್ರಕರಣ | ನಟ ಪ್ರಕಾಶ್ ರಾಜ್ ಹೆಸರು ಪ್ರಸ್ತಾಪ ಆದ ಕೂಡಲೇ ಕ್ರಿಮಿನಲ್ ಅಲ್ಲ : ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಪ್ರಕಾಶ್ ರಾಜ್(PTI)/ಪ್ರಿಯಾಂಕ್ ಖರ್ಗೆ
ಬೆಂಗಳೂರು : ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಹೆಸರು ಪ್ರಸ್ತಾಪ ಆದ ಕೂಡಲೇ ಎಲ್ಲರೂ ಕ್ರಿಮಿನಲ್ ಅಲ್ಲ. ಈ ಪ್ರಕರಣದ ತನಿಖೆಯ ಬಗ್ಗೆ ನ್ಯಾಯಾಲಯ ಎಸ್‍ಐಟಿ ಮುಖ್ಯಸ್ಥರಿಗೆ ವರದಿ ಕೇಳಿದೆ, ಅವರು ಉತ್ತರ ಕೊಡಲಿ. ಮಾಧ್ಯಮಗಳಲ್ಲಿ ಚರ್ಚಿಸಲು ಆಗುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಈ ಸಂಬಂಧ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಮೃತದೇಹಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಹೆಸರು ಪ್ರಸ್ತಾಪವಾದ ಕೂಡಲೇ ಕ್ರಿಮಿನಲ್ ಎಂದು ಪರಿಗಣಿಸಲು ಬರುವುದಿಲ್ಲ. ತನಿಖೆಯ ವರದಿ ಬಹಿರಂಗಗೊಂಡ ಬಳಿಕ ಸತ್ಯಾಂಶ ತಿಳಿಯಲಿದೆ ಎಂದರು.
ಇನ್ನು, ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಅಂತಿಮ ವರದಿಯನ್ನು ಸಲ್ಲಿಸಲು ಎಸ್‍ಐಟಿಗೆ ನಿರ್ದೇಶಿಸಬೇಕು ಎಂದು ಕೋರಿ ಈ ಪ್ರಕರಣದ ಆರಂಭದಲ್ಲಿ ಸಾಕ್ಷಿ ದೂರುದಾರನಾಗಿದ್ದ ಚಿನ್ನಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಈ ಬಗ್ಗೆ ಚಿನ್ನಯ್ಯ ಹೈಕೋಟ್‍ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರೂ ಉಲ್ಲೇಖಿಸಿದ್ದಾನೆ.
ರೆಕ್ಕೆ-ಪುಕ್ಕಗಳ ಕಟ್ಟಲೆತ್ನಿಸುತ್ತಿರುವ ಸುದ್ದಿಗಳ ನಂಬದಿರಿ: ನಟ ಪ್ರಕಾಶ್ ರಾಜ್ ಸ್ಪಷ್ಟನೆ
ಈ ಕುರಿತು ನಟ ಪ್ರಕಾಶ್ ರಾಜ್ ‘ಎಕ್ಸ್’ ಖಾತೆಯ ಮೂಲಕ ಪೋಸ್ಟ್ ಮಾಡಿ ಸ್ಪಷ್ಟೀಕರಣ ನೀಡಿದ್ದು, ‘ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳ ಪ್ರಕರಣದ ಕುರಿತಂತೆ ನನ್ನ ಬಗ್ಗೆ ಕೆಲವು ಸುದ್ದಿ ಚರ್ಚಿಸಲ್ಪಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಅತಿ ಸೂಕ್ಷ್ಮವಾದ ಮತ್ತು ಕೋಟ್ಯಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿರುವ ಪ್ರಕರಣವಾಗಿದೆ. ಆದ್ದರಿಂದ, ಈ ರೀತಿಯ ಅನುಮಾನಗಳಿಗೆ ಉತ್ತರಿಸಬೇಕಾಗಿರುವುದು ನನ್ನ ಕರ್ತವ್ಯವೂ ಆಗಿದೆ. ನಾನು ಸದ್ಯ ದೂರದೂರಿನಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ನಾನೇ ಸ್ವತಃ ಬಂದು ಮಾಧ್ಯಮ ಮಿತ್ರರ ಮೂಲಕ ಉತ್ತರಿಸುತ್ತೇನೆ. ಅಲ್ಲಿಯವರೆಗೆ ಗಾಳಿ ಮಾತುಗಳನ್ನು ಮತ್ತು ಕೆಲವು ದುರುಳರು ಈ ಸುದ್ದಿಗೆ ಕಟ್ಟಲೆತ್ನಿಸುತ್ತಿರುವ ರೆಕ್ಕೆ ಪುಕ್ಕಗಳನ್ನು ನಂಬದಿರಿ' ಎಂದು ಬರೆದುಕೊಂಡಿದ್ದಾರೆ.
ಎಲ್ಲರಿಗು ನಮಸ್ಕಾರ.. ಮಾಧ್ಯಮಗಳಲ್ಲಿ… ಸಾಮಾಜಿಕ ಜಲತಾಣಗಳಲ್ಲಿ ಧರ್ಮಸ್ತಳ ಪ್ರಕರಣದ ಕುರಿತಂತೆ ನನ್ನ ಬಗ್ಗೆ ಕೆಲವು ಸುದ್ದಿ ಚರ್ಚಿಸಲ್ಪಡುತ್ತಿರುವು ನನ್ನ ಗಮನಕ್ಕೆ ಬಂದಿದೆ. ಇದು ಅತಿ ಸೂಕ್ಷ್ಮವಾದ .. ಮತ್ತು ಕೋಟ್ಯಾಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿರುವ ಪ್ರಕರಣವಾಗಿರುವುದರಿಂದ ..ಈ ರೀತಿಯ ಅನುಮಾನಗಳಿಗೆ ಉತ್ತರಿಸಬೇಕಾಗಿರುವುದು ನನ್ನ…
— Prakash Raj (@prakashraaj) June 12, 2026