ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ವಿತರಣೆಗೆ ಆದೇಶ
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್‍ಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಬಸ್‍ಪಾಸ್ ವಿತರಣೆಗೆ ಸರಕಾರ ಅನುಮೋದನೆ ನೀಡಿದ್ದು, ಆದೇಶ ಹೊರಡಿಸಿದೆ.
ಉಚಿತ ಬಸ್ ಪಾಸ್‍ಗಳನ್ನು ಉಪಯೋಗಿಸಿ ಹೊರ ರಾಜ್ಯಗಳ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಸಾರಿಗೆ ನಿಗಮಗಳು ಮತ್ತು ಸಂಸ್ಥೆಗಳು ವಿದ್ಯಾರ್ಥಿಗಳ ಉಚಿತ ಪಾಸ್ ವಿತರಣೆಗೆ ಸಂಬಂಧಿಸಿದಂತೆ ಹಾಲಿ ಇರುವ ನಿಯಮಾವಳಿಗಳನ್ನು ಅನುಸರಿಸಲಾಗುತ್ತದೆ. ಅಂದರೆ, ವಿದ್ಯಾರ್ಥಿ ಪಾಸ್‍ಗಾಗಿ ಶೈಕ್ಷಣಿಕ ವಿದ್ಯಾಭ್ಯಾಸದ ಅರ್ಹತಾ ಮಾನದಂಡಗಳು, ದೂರದ ಮಿತಿ, ಪಾಸಿನ ಕಾಲಾವಧಿಯ ನಿಬಂಧನೆಗಳು ಅನ್ವಯವಾಗುತ್ತವೆ.
ವಿದ್ಯಾರ್ಥಿಗಳು ರಾಜ್ಯ ಸರಕಾರದ ಸೇವಾ ಸಿಂಧು ಪೋರ್ಟಲ್‍ನಲ್ಲಿ ಎಲ್ಲಿಂದ ಬೇಕಾದರೂ ಆನ್‍ಲೈನ್‍ನಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಈಗಾಗಲೇ ವಿತರಿಸಲಾಗಿರುವ ಬಸ್ ಪಾಸ್‍ಗಳನ್ನು ಬಳಸಿಯೂ ವಿದ್ಯಾರ್ಥಿಗಳು ಪ್ರಯಾಣಿಸಬಹುದು. ಇದಕ್ಕಾಗಿ ಪಾವತಿಸಿರುವ ಹಣವನ್ನು 15 ದಿನಗಳೊಳಗಾಗಿ ವಿದ್ಯಾರ್ಥಿಗಳಿಗೆ ಮರು ಪಾವತಿಸಲಾಗುತ್ತದೆ.
ರಾಜ್ಯದಲ್ಲಿ ವಾಸವಿದ್ದು, ನೆರೆ ರಾಜ್ಯಗಳಲ್ಲಿನ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ನೆರೆ ರಾಜ್ಯಗಳಲ್ಲಿ(ರಾಜ್ಯದ ಗಡಿಭಾಗಗಳಲ್ಲಿ) ವಾಸವಿದ್ದು ರಾಜ್ಯದೊಳಗಿರುವ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಈ ಉಚಿತ ಬಸ್‍ಪಾಸ್ ನೀಡಲಾಗುತ್ತದೆ ಎಂದು ಸಾರಿಗೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪುಷ್ಪಾ ವಿ.ಎಸ್. ಆದೇಶದಲ್ಲಿ ತಿಳಿಸಿದ್ದಾರೆ.
ಅಪಘಾತ ವಿಮೆ: ಉಚಿತ ಬಸ್‍ಪಾಸ್ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಅಪಘಾತ ವಿಮೆ ಇರಲಿದೆ. ಇದಕ್ಕೆ ಪ್ರತಿ ತಿಂಗಳು ಪ್ರತಿ ವಿದ್ಯಾರ್ಥಿಗೆ 5ರೂ.ಗಳ ಕಂತನ್ನು ಸರಕಾರವೇ ಪಾವತಿಸಲಿದೆ. ಪ್ರತಿ ಬಸ್ ಪಾಸ್‍ಗೆ ತಲಾ 100ರೂ. ಸಂಸ್ಕರಣಾ ಶುಲ್ಕವನ್ನು ಸರಕಾರವೇ ನಿಗಮಗಳಿಗೆ ಭರಿಸಲಿದೆ. ಈ ಅಪಘಾತ ಪರಿಹಾರ ನಿಧಿ ಮತ್ತು ಸಂಸ್ಕರಣೆಗೆ ತಗಲುವ ಸುಮಾರು 15ಕೋಟಿ ರೂ.ನಾಲ್ಕು ನಿಗಮಗಳಿಗೆ ಸರಕಾರವೇ ಪಾವತಿಸಲಿದೆ. ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‍ಪಾಸ್ ವಿತರಣೆಗೆ ವಾರ್ಷಿಕ 286ಕೋಟಿ ರೂ.ವೆಚ್ಚವಾಗುವ ನಿರೀಕ್ಷೆ ಇದ್ದು, ಈ ಹಣವನ್ನೂ ರಾಜ್ಯ ಸರಕಾರ ನಿಗಮಗಳಿಗೆ ಬಿಡುಗಡೆ ಮಾಡಲಿದೆ.