×
Ad

ಹಲವು ಜಾತಿಗಳನ್ನು ಅಂತಿಮ ಪಟ್ಟಿಯಿಂದ ಕೈ ಬಿಡಲಾಗಿದೆ : ಹಿಂದುಳಿದ ವರ್ಗಗಳ ಆಯೋಗ

Update: 2025-09-23 18:47 IST

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್

ಬೆಂಗಳೂರು, ಸೆ.23: ಆದಿ ಆಂಧ್ರ ಕ್ರಿಶ್ಚಿಯನ್, ಆದಿ ದ್ರಾವಿಡ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬುಡಗ ಜಂಗಮ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್, ಲಮಾಣಿ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ಮಹಾರ್ ಕ್ರಿಶ್ಚಿಯನ್, ಮಾಲಾ ಕ್ರಿಶ್ಚಿಯನ್, ಪರಯ ಕ್ರಿಶ್ಚಿಯನ್, ವಡ್ಡ ಕ್ರಿಶ್ಚಿಯನ್ ಹಾಗೂ ವಾಲ್ಮೀಕಿ ಕ್ರಿಶ್ಚಿಯನ್ ಈ 14 ಜಾತಿಗಳು ಸೇರಿದಂತೆ ಹಲವು ಜಾತಿಗಳ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಕೈ ಬಿಟ್ಟು ಅಂತಿಮಗೊಳಿಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.

ಮಂಗಳವಾರ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಿಯೋಗವು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರಿಗೆ ಈ ಮೇಲ್ಕಂಡ 14 ಜಾತಿಗಳನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸೇರಿಸಬಾರದು ಎಂದು ಮನವಿ ಸಲ್ಲಿಸಿತು.

ಈ ಕುರಿತು ಸ್ಪಷ್ಟಣೆ ನೀಡಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ್, ಈ ಮೇಲೆ ತೋರಿಸಲಾದ 14 ಜಾತಿಗಳ ಕುರಿತು ಸೆ.23ರಂದು ನಡೆದ ಆಯೋಗದ ಸಭೆಯಲ್ಲಿ ದೀರ್ಘವಾಗಿ ಚರ್ಚಿಸಿ ಪರಿಶೀಲಿಸಲಾಯಿತು. ಆ.22ರಂದು ಪತ್ರಿಕೆಗಳಲ್ಲಿ ಸಲಹೆ ಕೋರಿ ಪ್ರಕಟಿಸಿರುವ ಜಾತಿ ಪಟ್ಟಿಯಲ್ಲಿ ಈ ಜಾತಿಗಳ ಹೆಸರು ನಮೂದಾಗಿತ್ತು ಎಂದು ತಿಳಿಸಿದ್ದಾರೆ.

ಆನಂತರ ಸ್ವೀಕರಿಸಿರುವ ಸಲಹೆ ಮತ್ತು ಚರ್ಚೆಯ ನಂತರ ಮೇಲಿನ ಜಾತಿಗಳು ಸೇರಿದಂತೆ ಹಲವು ಜಾತಿಗಳ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಕೈ ಬಿಟ್ಟು ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಆದಾಗ್ಯೂ ಸಮೀಕ್ಷಾ ಕೈಪಿಡಿ-2025ರ ಪುಟ ಸಂಖ್ಯೆ 57 ರಿಂದ 89ರವರೆಗಿನ 1561 ಜಾತಿಗಳ ಪಟ್ಟಿಯಲ್ಲಿ ಹಾಗೂ ಇಡಿಸಿಎಸ್ ಸಂಸ್ಥೆಯು ಸಿದ್ದಪಡಿಸಿರುವ ಸಮೀಕ್ಷಾ ಆ್ಯಪ್‍ನಲ್ಲಿ ಅಳವಡಿಸಿರುವ ಜಾತಿ ಪಟ್ಟಿಯ ಡ್ರಾಪ್ ಡೌನ್ ನಲ್ಲಿಯೂ ಈ ಮೇಲ್ಕಂಡ 14 ಜಾತಿಗಳು ಸೇರಿರುವುದಿಲ್ಲ ಎಂಬ ಅಂಶವನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ದಯಾನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News