ಬಸವರಾಜ ಹೊರಟ್ಟಿ ರಾಜೀನಾಮೆ ಅಂಗೀಕರಿಸದಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ
ರಾಜ್ಯಪಾಲರಿಗೆ ಪತ್ರ ಬರೆದು ತಮ್ಮ ರಾಜೀನಾಮೆಯ ಪ್ರಸಂಗ ವಿವರಿಸಿದ ಹೊರಟ್ಟಿ
ಬೆಂಗಳೂರು : ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದ್ದು, ಇದನ್ನು ಅಂಗೀಕರಿಸಬಾರದು. ಜತೆಗೆ, ಆಡಳಿತ ಪಕ್ಷದ ನಾಯಕರು ಗೂಂಡಾಗಳಂತೆ ವರ್ತಿಸಿದ್ದು, ಈ ಸಂಬಂಧ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ರಾಜ್ಯಪಾಲರಿಗೆ ಬಿಜೆಪಿ ದೂರು ಸಲ್ಲಿಕೆ ಮಾಡಿದೆ.
ರವಿವಾರ ನಗರದ ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ, ಬಸವರಾಜ ಹೊರಟ್ಟಿ ಅವರು, ‘ಆ.14ರಂದು ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿದ್ದರೂ ಅವಸರದಲ್ಲಿ ಅವರಿಂದ ರಾಜೀನಾಮೆ ಪಡೆದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರರ ವಿರುದ್ಧ ಸಂವಿಧಾನದ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿದರು.
ಸಭಾಪತಿ ರಾಜೀನಾಮೆ ನೀಡಲು ಉಪಸಭಾಪತಿ ಇರಬೇಕು. ಆದರೆ, ಉಪಸಭಾಪತಿಗಳು ಇಲ್ಲ. ಅವರು ಇಲ್ಲದಿದ್ದಾಗ ಯಾರು ಅಂಗೀಕಾರ ಮಾಡಬೇಕು?. ರಾಜ್ಯಪಾಲರ ಕ್ರಮ ಏನು? ಸದನದಲ್ಲಿ ಏನು ಆಗಬೇಕು?. ಎಂಬ ಬಗ್ಗೆ ಕಾನೂನು ಮಾಹಿತಿ ಕೇಳುತ್ತೇವೆ. ಮುಂದಿನ ನಡೆ ಏನು ಎಂದು ತೀರ್ಮಾನ ಮಾಡುತ್ತೇವೆ.
ನಮ್ಮ ದೂರಿಗೆ ಸ್ಪಂದಿಸಿರುವ ರಾಜ್ಯಪಾಲರು ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ತಾವು ಮಧ್ಯಪ್ರವೇಶಿಸಿ ಸಂವಿಧಾನದ ಅಡಿಯಲ್ಲಿ ವಿಶೇಷ ಅಧಿಕಾರ ಬಳಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವುದಾಗಿ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಸದಸ್ಯರಾದ ಗೋಪಿನಾಥ ರೆಡ್ಡಿ, ಟಿ.ಎ.ಶರವಣ ಇದ್ದರು.
ರಾಜ್ಯಪಾಲರಿಗೆ ಹೊರಟ್ಟಿ ಪತ್ರ: ಬಸವರಾಜ ಹೊರಟ್ಟಿ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದು, ತಮ್ಮ ರಾಜೀನಾಮೆಗೆ ಹಿನ್ನೆಲೆಯಾದ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ.
‘ಆ.14ರಂದು ಸದನದಲ್ಲಿಯೇ ನಾನು ರಾಜೀನಾಮೆ ನೀಡುವೆ ಎಂದು ಈಗಾಗಲೇ ತಿಳಿಸಿದ್ದೆ. ಆದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು ಹಾಗೂ ಹಲವು ಪರಿಷತ್ತಿನ ಸದಸ್ಯರು ಏಕಾಏಕಿ ತಮ್ಮ ಕೊಠಡಿಗೆ ಆಗಮಿಸಿ ಇಂದೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಅವರು ಸೂಚಿಸಿದರು. ಈ ಅನಿರೀಕ್ಷಿತ ಬೆಳವಣಿಗೆಯಿಂದ ತಮಗೆ ತೀವ್ರ ಆಶ್ಚರ್ಯವಾಯಿತು. ಆ ಘಳಿಗೆಯಲ್ಲಿ ಎದುರಾದ ಮುಜುಗರದ ವಾತಾವರಣ ಹಾಗೂ ಪರಿಸ್ಥಿತಿಯನ್ನು ತಿಳಿಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳ ಮನವಿಗೆ ಒಪ್ಪಿ ತಾವು ತಕ್ಷಣವೇ ರಾಜೀನಾಮೆ ಸಲ್ಲಿಸಬೇಕಾಯಿತು’ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.