Bidadi Township | ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಒತ್ತಾಯವಿರುವುದಿಲ್ಲ : ಡಿ.ಕೆ.ಶಿವಕುಮಾರ್
"ರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆ; ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕ"
ಬೆಂಗಳೂರು : ʼಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್ ಯೋಜನೆಗೆ ಮರುಜೀವ ನೀಡಲಾಗುತ್ತಿದ್ದು, ಇದನ್ನು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನ ಹಾಗೂ ಸುಸಜ್ಜಿತ ವಸತಿ ಒಳಗೊಂಡ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆʼ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೀಡಿಯೊ ಸಂದೇಶ ಹಂಚಿಕೊಂಡಿರುವ ಅವರು, ʼರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಿಂದಿನ ಸರಕಾರ ಎಕರೆಗೆ ಕೇವಲ 25 ಲಕ್ಷ ರೂ. ನಿಗದಿಪಡಿಸಿದ್ದರೆ, ನಮ್ಮ ಸರಕಾರ ಪ್ರತಿ ಎಕರೆಗೆ 3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ. ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ 50% ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲಾಗುವುದು. ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿರುವುದಿಲ್ಲ. ಯುವಜನತೆಗೆ ಅಪಾರ ಉದ್ಯೋಗಾವಕಾಶ ಸೃಷ್ಟಿಸಿ, ನಮ್ಮ ಅನ್ನದಾತರಿಗೆ ಗೌರವಯುತ ಜೀವನ ಒದಗಿಸಲು ನಮ್ಮ ಸರಕಾರ ಬದ್ಧವಾಗಿದೆ. ನಿಮ್ಮ ಸಹಕಾರವಿರಲಿʼ ಎಂದು ಮನವಿ ಮಾಡಿದ್ದಾರೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ ಎಂದಿದ್ದಾರೆ.