ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ‘ಗೃಹಜ್ಯೋತಿ’ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಗೆ ನೀಡಿರುವ ಗಡುವು ಅ.31ಕ್ಕೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಗ್ರಾಹಕರು ಅಗತ್ಯ ದಾಖಲಾತಿಗಳನ್ನು ಬೆಸ್ಕಾಂ ಉಪ ವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಸಲ್ಲಿಸಲು ಬೆಸ್ಕಾಂ ಮನವಿ ಮಾಡಿದೆ.

ಮೂರುವರೆ ತಿಂಗಳಿನಿಂದ ನಡೆಯುತ್ತಿರುವ ‘ಗೃಹಜ್ಯೋತಿ ಯೋಜನೆ’ ಸಮೀಕ್ಷೆಯಲ್ಲಿ ಬೀಗ ಹಾಕಿರುವ, ಮನೆ ಖಾಲಿ ಇರುವ ಹಾಗೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ಬೆಸ್ಕಾಂ ಕಚೇರಿಗೆ ತೆರಳಿ ದಾಖಲಾತಿ ಸಲ್ಲಿಸಲು ಸರಕಾರ ಅವಕಾಶ ಕಲ್ಪಿಸಿದ್ದು, ಗಡುವಿನೊಳಗೆ ದಾಖಲಾತಿ ಸಲ್ಲಿಸಲು ಬೆಸ್ಕಾಂ ಮನವಿಮಾಡಿದ್ದು, ದಾಖಲಾತಿ ಸಲ್ಲಿಸಲು ಇದು ಕೊನೆಯ ಅವಕಾಶ ಎಂದು ಸ್ಪಷ್ಟಪಡಿಸಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿನ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಯ ಗ್ರಾಹಕರು ಸೇರಿದಂತೆ ಒಟ್ಟು 74,29,773 ಲಕ್ಷ ಗ್ರಾಹಕರು ಗೃಹಜ್ಯೋತಿ ಫಲಾನುಭವಿಗಳಿದ್ದು, ಈ ಪೈಕಿ 73,17,687 ಲಕ್ಷ ಗ್ರಾಹಕರ ಸಮೀಕ್ಷೆ (ಶೇ.98.49) ಅ.22ಕ್ಕೆ ಪೂರ್ಣಗೊಂಡಿದೆ.

ಸಮೀಕ್ಷೆ ಸಂದರ್ಭದಲ್ಲಿ ಬೀಗ ಹಾಕಿರುವ, ಖಾಲಿ ಇರುವ ಮನೆಗಳಿಗೆ ಬೆಸ್ಕಾಂ ಸಿಬ್ಬಂದಿ ಮೂರು ಬಾರಿ ಭೇಟಿ ನೀಡಿದ್ದು, ಈ ವರ್ಗಗಳ ಗ್ರಾಹಕರ ಮೊಬೈಲ್‍ಫೋನ್‍ಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಸಂದೇಶವನ್ನು ಕಳುಹಿಸಲಾಗಿತ್ತು. ಇಂತಹ ಗ್ರಾಹಕರಿಗೆ ದಾಖಲಾತಿ ಸಲ್ಲಿಸಲು ಅ.31 ಕೊನೆಯ ದಿನವಾಗಿದ್ದು, ಗಡುವು ವಿಸ್ತರಣೆ ಇಲ್ಲ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor