‘ಕಬ್ಬು ಬೆಳೆಗಾರರ ಸಮಸ್ಯೆ’ : ರಾಜ್ಯ ಸರಕಾರ ನುಣುಚಿಕೊಳ್ಳುವುದು ಬೇಡ : ಆರ್.ಅಶೋಕ್
ಬೆಂಗಳೂರು : ರಾಜ್ಯದ ಕಬ್ಬು ಬೆಳೆಗಾರರ ಸಂಕಷ್ಟಗಳನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ, ರಾಜ್ಯದ ಕಾಂಗ್ರೆಸ್ ಸರಕಾರ ಮಾತ್ರ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಕೂಡಲೇ ರಾಜ್ಯ ಸರಕಾರ ತನ್ನ ಪಾಲಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದ ಕೂಡಲೇ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಬೆಳೆಗಾರರ ಅಹವಾಲುಗಳನ್ನು ಆಲಿಸಿದ್ದಾರೆ. ಕಬ್ಬು ಬೆಳೆಗಾರರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ, ನೀತಿ ಆಯೋಗದ ಮಾಜಿ ಸದಸ್ಯ ರಮೇಶ್ ಚಂದ್ ಅಧ್ಯಕ್ಷತೆಯ ಜಂಟಿ ಸಮಿತಿ ರಚಿಸಿದೆ. ಈ ಸಮಿತಿಯು, ಬೆಳೆಗಾರರ ಆದಾಯ ಹೆಚ್ಚಿಸುವುದು, ಉತ್ಪಾದನಾ ವೆಚ್ಚ ಮತ್ತು ಸಕ್ಕರೆ ಉದ್ಯಮದ ಆರ್ಥಿಕ ಸ್ಥಿತಿಗತಿ ಪರಿಶೀಲಿಸಿ ವರದಿ ನೀಡಲಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರಕಾರ ಪ್ರತಿ ಟನ್ ಕಬ್ಬಿಗೆ 3,300 ರೂ.ದರ ನೀಡುವ ನಿರ್ಧಾರವನ್ನು ಪ್ರಕಟಿಸಿತ್ತು. ಇದರಲ್ಲಿ 100 ರೂ. ಹೆಚ್ಚುವರಿ ಸಹಾಯಧನವಾಗಿದ್ದು, ರಾಜ್ಯ ಸರಕಾರದಿಂದ 50 ರೂ. ಹಾಗೂ ಸಕ್ಕರೆ ಕಾರ್ಖಾನೆಗಳಿಂದ 50 ರೂ. ನೀಡುವುದಾಗಿ ತೀರ್ಮಾನವಾಗಿತ್ತು. ಇದನ್ನು ವಿರೋಧಿಸಿ ಕಾರ್ಖಾನೆಗಳು ಕೋರ್ಟ್ ಮೊರೆ ಹೋಗಿದ್ದು, ಈವರೆಗೂ ಕಾರ್ಖಾನೆಗಳ ಪಾಲಿನ 50 ರೂ. ಕೊಡಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಕ್ರಮ ವಹಿಸಿ ಆ 50 ರೂ. ಸಹಾಯಧನವನ್ನು ರೈತರಿಗೆ ಕೊಡಿಸಬೇಕು. ಕಬ್ಬು ತೂಕದಲ್ಲಿ ಮೋಸವಾಗುವುದನ್ನು ತಪ್ಪಿಸಲು ಸಕ್ಕರೆ ಕಾರ್ಖಾನೆಗಳ ಬಳಿ ವೇ ಬ್ರಿಡ್ಜ್ ಅಳವಡಿಸುವ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು. ಇಳುವರಿ ವಂಚನೆ ತಪ್ಪಿಸಲು, ಲ್ಯಾಬ್ ಪರೀಕ್ಷೆ ಮತ್ತು ಬೆಳೆ ವಿಮೆ ವಿಚಾರದಲ್ಲಿ ಬೆಳಗಾರರ ಹಿತರಕ್ಷಣೆಗೆ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬೇರೆ ರಾಜ್ಯಗಳಲ್ಲಿ ಜಾರಿಯಾದ ರಾಜ್ಯ ಸಲಹಾ ಬೆಲೆ(ಎಸ್‍ಎಪಿ)ಯನ್ನು ನಮ್ಮಲ್ಲೂ ಜಾರಿ ಮಾಡಬೇಕು. ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಪ್ರತಿ ಯುನಿಟ್ ವಿದ್ಯುತ್‍ಗೆ ರಾಜ್ಯ ಸರಕಾರ 2.80 ರೂ. ನಿಗದಪಡಿಸಿದೆ. ಅದೇ ಖಾಸಗಿ ಕಂಪನಿಗಳಿಂದ ಯುನಿಟ್‍ಗೆ 22 ರೂ. ಕೊಟ್ಟು ಖರೀದಿಸಲಾಗುತ್ತಿದೆ. ಇದನ್ನು ಹೆಚ್ಚಳ ಮಾಡಿದರೆ ಅದರ ಲಾಭ ರೈತರಿಗೆ ಸಿಗುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ.
ಸಕ್ಕರೆ ಕಾರ್ಖಾನೆಗಳಿಗೆ ನೀರಿನ ಬಾಬ್ತು 5 ಲಕ್ಷ ರೂ. ಇದ್ದು, ಅದನ್ನು 1 ಕೋಟಿ ರೂ.ಗೆ ಏರಿಸಿ ಕಾರ್ಖಾನೆಗಳಿಗೆ ಹೊರೆ ಹೇರಲಾಗಿದೆ. ಇದನ್ನು ಕೂಡಲೇ ಕಡಿಮೆ ಮಾಡಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.