ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣ: 26.27 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು ಹಾಕಿದ ಈ.ಡಿ.
ಸಾಂದರ್ಭಿಕ ಚಿತ್ರ | PTI
ಬೆಂಗಳೂರು : ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸೇರಿದ ಸುಮಾರು 26.27 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ(ಈ.ಡಿ.) ಮುಟ್ಟುಗೋಲು ಹಾಕಿಕೊಂಡಿರುವುದಾಗಿ ತಿಳಿಸಿದೆ.
ಈ ಸಂಬಂಧ ಸೋಮವಾರ ಪತ್ರಿಕಾ ಪ್ರಕಟನೆ ಮೂಲಕ ಮಾಹಿತಿ ನೀಡಿದ ಈ.ಡಿ., ಪ್ರಕರಣದ ಆರೋಪಿಗಳಾದ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕರುಗಳಾದ ಬಿ.ಕೆ.ನಾಗರಾಜಪ್ಪ, ಆರ್.ಲೀಲಾವತಿ ಹಾಗೂ ಇತರೆ ಆರೋಪಿಗಳಿಗೆ ಸೇರಿದ ಸ್ಥಿರಾಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್‍ಎ) ಅಡಿ ಪ್ರಕರಣ ದಾಖಲಿಸಿಕೊಂಡು ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದೆ.
2018ರಿಂದ 2022ರ ಅವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ 97 ಕೋಟಿ ರೂ. ಹಣ ದುರ್ಬಳಕೆ ಸಂಬಂಧ ಈ.ಡಿ. ಪ್ರಕರಣ ದಾಖಲಿಸಿಕೊಂಡು ಬಿ.ಕೆ.ನಾಗರಾಜಪ್ಪ ಹಾಗೂ ಆರ್.ಲೀಲಾವತಿ ಅವರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಅಕ್ರಮ ನಡೆದಿರುವುದು ಬಯಲಾಗಿತ್ತು.
ಭೋವಿ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರಕಾರ ನೀಡಲಾಗುವ ಸಾಲ-ಸಬ್ಸಿಡಿ ಸೇರಿದಂತೆ ವಿವಿಧ ಯೋಜನೆಗಳ 750 ಮಂದಿ ನಕಲಿ ಫಲಾನುಭವಿಗಳ ಖಾತೆ ತೆರೆದು ಹಣ ದುರ್ಬಳಕೆ ಮಾಡಿಕೊಂಡಿದ್ದರು ಎಂದು ಈ.ಡಿ. ತಿಳಿಸಿದೆ.
ನಿಗಮದಿಂದ ಬಿಡುಗಡೆಯಾಗುವ ಹಣವನ್ನು ನಕಲಿ ಫಲಾನುಭವಿಗಳಿಗೆ ವರ್ಗಾಯಿಸಿದ ಬಳಿಕ ಬಿ.ಕೆ.ನಾಗರಾಜಪ್ಪ ಹಾಗೂ ಆರ್.ಲೀಲಾವತಿ ಅವರ ಕುಟುಂಬಸ್ಥರು ಹಾಗೂ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಕುಟುಂಬಸ್ಥರ ಹೆಸರಿನಲ್ಲಿರುವ ಪಾಲುದಾರಿಕೆ ಕಂಪೆನಿಗಳಾದ ಆದಿತ್ಯ ಎಂಟರ್ ಪ್ರೈಸಸ್, ಸೋಮನಾಥೇಶ್ವರ ಎಂಟರ್ ಪ್ರೈಸಸ್, ನ್ಯೂ ಡ್ರೀಮ್ಸ್ ಎಂಟರ್ ಪ್ರೈಸಸ್, ಹರಿನಿಥ ಕ್ರಿಯೇಷನ್ಸ್, ಅನ್ನಿಕಾ ಎಂಟರ್ ಪ್ರೈಸಸ್ ಕಂಪೆನಿಗಳಿಗೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಈ.ಡಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ನಿಗಮದ ಹಣದಲ್ಲಿ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಬಿ.ಕೆ.ನಾಗರಾಜಪ್ಪ ಆಸ್ತಿ ಖರೀದಿ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು. ನಗರದ ಹಲವೆಡೆ ಕುಟುಂಬಸ್ಥರ ಹೆಸರಿನಲ್ಲಿ ಚರ ಹಾಗೂ ಸ್ಥಿರಾಸ್ತಿ ಖರೀದಿಸಿದ್ದರು. ಅದೇ ರೀತಿ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಆರ್.ಲೀಲಾವತಿ ಸಹ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಇಬ್ಬರು ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ತನಿಖೆ ಮುಂದುವರೆಸಿರುವುದಾಗಿ ಈ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.