×
Ad

ಪರಿಸರ ನಿಯಮಗಳ ಉಲ್ಲಂಘನೆ: ‘ಬಿಗ್​ ಬಾಸ್ʼ’ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ!

ಬಿಗ್‍ಬಾಸ್ ರಿಯಾಲಿಟಿ ಶೋ ಸ್ಥಗಿತ: ಸ್ಪರ್ಧಿಗಳು ಸ್ಥಳಾಂತರ

Update: 2025-10-07 19:41 IST

ಬೆಂಗಳೂರು: ಪರಿಸರ ನಿಯಮಗಳ ಉಲ್ಲಂಘನೆ ಆರೋಪದಡಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ ಬೆನ್ನಲ್ಲೇ, ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್ ಪಾರ್ಕ್ ಮೇಲೆ ಕಂದಾಯ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ, ಬೀಗ ಜಡಿದಿದ್ದಾರೆ. ಹೀಗಾಗಿ ಖಾಸಗಿ ವಾಹಿನಿಯೊಂದರ ಜನಪ್ರಿಯ ರಿಯಾಲಿಟಿ ಶೋ ಬಿಗ್‍ಬಾಸ್ ಕನ್ನಡ ಸೀಸನ್-12ರ ಚಿತ್ರೀಕರಣಕ್ಕೆ ತೊಡಕುಂಟಾಗಿದೆ.

ಬಿಗ್‍ಬಾಸ್ ಮನೆಯಲ್ಲಿ ಪ್ರತಿದಿನ ಸುಮಾರು 2.5 ಲಕ್ಷ ಲೀಟರ್ ನೀರು ಬಳಕೆ ಬಳಕೆಯಾಗುತ್ತಿದ್ದು, ನಿಯಮಗಳ ಪ್ರಕಾರ ನೀರನ್ನು ಶುದ್ದೀಕರಣ ಮಾಡಿ ಪುನರ್ಬಳಕೆ ಮಾಡಬೇಕು. ಆದರೆ, ಪುನರ್ಬಳಕೆ ಮಾಡದೇ ನಿಯಮ ಉಲ್ಲಂಘನೆ ಮಾಡಲಾಗಿದೆ ಹಾಗೂ ಹಸಿ ಕಸ-ಒಣ ಕಸ ವಿಂಗಡಿಸದೇ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಹಾಗೂ ತ್ಯಾಜ್ಯ ಮಿಶ್ರಿತ ನೀರನ್ನು ಚರಂಡಿಗೆ ಬಿಡಲಾಗಿದೆ.

ಅಲ್ಲದೆ, ಜಾಲಿವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್ ಪಾರ್ಕ್ ಅನ್ನು ನಡೆಸಲು ಸರಕಾರಿ ಸ್ವಾಮ್ಯದ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯದಿರುವುದು ಹಾಗೂ ಹಲವು ನಿಯಮಗಳನ್ನು ಮೀರಿರುವುದು ಅಧಿಕಾರಿಗಳ ಕ್ರಮಕ್ಕೆ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಸಾರ್ವಜನಿಕರ ದೂರು ಹಾಗೂ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವಿಶೇಷ ಕಾರ್ಯಪಡೆ (ಟಾಸ್ಕ್ ಪೋರ್ಸ್) ತಪಾಸಣೆಯ ವರದಿಗಳ ಹಿನ್ನೆಲೆಯಲ್ಲಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸಿನ ಮೇರೆಗೆ ಜಿಲ್ಲಾಧಿಕಾರಿಗಳ ಆದೇಶದನ್ವಯ ಕ್ರಮ ಕೈಗೊಳ್ಳಲಾಗಿದೆ.

ಅ.7ರ ಮಂಗಳವಾರ ಸಂಜೆ ರಾಮನಗರ ತಾಲೂಕು ತಹಸೀಲ್ದಾರ್ ತೇಜಸ್ವಿನಿ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಬಿಡದಿ ಠಾಣೆಯ ಪೊಲೀಸರು ಜಾಲಿವುಡ್ ಸ್ಟುಡಿಯೋಸ್ ಸ್ಥಳಕ್ಕೆ ಧಾವಿಸಿ ಬಿಗ್‍ಬಾಸ್ ಸೀಸನ್ 12ರ ಚಿತ್ರೀಕರಣವನ್ನು ತಕ್ಷಣ ಸ್ಥಗಿತಗೊಳಿಸಿದರು.

ಈ ವೇಳೆ ಅಧಿಕಾರಿಗಳು ನೀಡಿದ್ದ ಒಂದು ಗಂಟೆ ಗಡುವಿನೊಳಗೆ ಬಿಗ್‍ಬಾಸ್‍ನ ಎಲ್ಲಾ ಸ್ಪರ್ಧಿಗಳು ಹೊರಬಂದರು. ನಂತರ ತಹಸೀಲ್ದಾರ್ ತೇಜಸ್ವಿನಿ ಅವರು ಪೆÇಲೀಸ್ ಬಂದೋಬಸ್ತಿನಲ್ಲಿ ಜಾಲಿವುಡ್ ಸ್ಟುಡಿಯೋಸ್ ಪ್ರವೇಶದ್ವಾರಕ್ಕೆ ಬೀಗ ಜಡಿದರು. ಜಿಲ್ಲಾಧಿಕಾರಿಗಳ ಆದೇಶದಂತೆ ಜಾಲಿವುಡ್ ಸ್ಟುಡಿಯೋಸ್‍ಗೆ ವಿದ್ಯುತ್ ಸ್ಥಗಿತಗೊಳಿಸುವಂತೆ ಬೆಸ್ಕಾಂಗೂ ಸೂಚನೆ ನೀಡಲಾಗಿದೆ.

ನೋಟಿಸ್‍ನಲ್ಲೇನಿದೆ?:

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅಕ್ಟೋಬರ್ 6ರಂದು ಜಾಲಿವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್‍ಗೆ ನೋಟಿಸ್ ಜಾರಿ ಮಾಡಿ, ಸ್ಥಳದಲ್ಲಿನ ಎಲ್ಲ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ನಿರ್ದೇಶಿಸಿತ್ತು.

ನೀರಿನ ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ 1974 ಮತ್ತು ವಾಯು ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ, 1998ರ ಅಡಿಯಲ್ಲಿ ಸ್ಥಾಪನೆಗೆ ಅಗತ್ಯವಾದ ಒಪ್ಪಿಗೆ ಮತ್ತು ಕಾರ್ಯಾಚರಣೆಗೆ ಒಪ್ಪಿಗೆಯನ್ನು ಪಡೆಯದೆ ಪಾರ್ಕ್ ಅನ್ನು ದೊಡ್ಡ ಪ್ರಮಾಣದ ಮನರಂಜನೆ ಮತ್ತು ಸ್ಟುಡಿಯೋ ಕಾರ್ಯಾಚರಣೆಗಳಿಗೆ ಬಳಸಲಾಗುತ್ತಿದೆ ಎಂದು ಮಂಡಳಿ ನೋಟಿಸ್‍ನಲ್ಲಿ ತಿಳಿಸಿತ್ತು.

ಈ ಉಲ್ಲಂಘನೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಾಚರಣೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಮತ್ತು ನಿಗದಿತ ಅವಧಿಯೊಳಗೆ ವಿವರಣೆ ನೀಡಲು ಆದೇಶದಲ್ಲಿ ಸೂಚಿಸಲಾಗಿತ್ತು. ಅಲ್ಲದೆ, ಈ ಆದೇಶ ಪಾಲಿಸಲು ವಿಫಲವಾದರೆ ಸಂಬಂಧಿತ ಪರಿಸರ ಕಾನೂನುಗಳ ಅಡಿಯಲ್ಲಿ ದಂಡದ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ನೋಟಿಸ್‍ನಲ್ಲಿ ಎಚ್ಚರಿಸಲಾಗಿತ್ತು.

ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಈಶ್ವರ್ ಖಂಡ್ರೆ

ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಮ್ಮ ಎಕ್ಸ್ ಖಾತೆಯ ಮೂಲಕ ಪೋಸ್ಟ್ ಮಾಡಿ, ಜಾಲಿವುಡ್ ಸ್ಟುಡಿಯೋಸ್ ಸಂಸ್ಥೆಗೆ ಜಲ ಕಾಯಿದೆ ಹಾಗೂ ವಾಯು ಕಾಯಿದೆಯಡಿ ಅಗತ್ಯ ಅನುಮತಿಗಳನ್ನು ಪಡೆಯದೆ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಎರಡು ಬಾರಿ ನೋಟಿಸ್ ನೀಡಿದ್ದರೂ ಅನುಪಾಲನೆ ಆಗದ ಕಾರಣ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪರಿಸರ ಕಾಯಿದೆ ಉಲ್ಲಂಘಿಸಿದರೆ ಕ್ರಮ ಅನಿವಾರ್ಯ ಎಂದಿದ್ದಾರೆ.

ಸ್ಪರ್ಧಿಗಳು ಸ್ಥಳಾಂತರ

ಬಿಗ್‍ಬಾಸ್ ಮನೆಗೆ ಕಂದಾಯ ಅಧಿಕಾರಿಗಳು ಬೀಗ ಹಾಕುತ್ತಿದ್ದಂತೆ ಬಿಗ್‍ಬಾಸ್ ಶೋನ ನಿರ್ವಾಹಕ ತಂಡದವರು ಎಲ್ಲ ಸ್ಪರ್ಧಿಗಳನ್ನು ಹೊರಗೆ ಕರೆತಂದು ಜಾಲಿವುಡ್ ಸ್ಟುಡಿಯೋಸ್ ಸಮೀಪವಿರುವ ಈಗಲ್‍ಟನ್ ರೆಸಾರ್ಟ್‍ಗೆ ಸ್ಥಳಾಂತರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News