×
Ad

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಎಚ್‌ಡಿಕೆ ಮನುವಾದಿಯಾಗಿದ್ದಾರೆ : ಸಿದ್ದರಾಮಯ್ಯ

Update: 2025-12-06 18:59 IST

ಎಚ್‌ಡಿ ಕುಮಾರಸ್ವಾಮಿ/ಸಿದ್ದರಾಮಯ್ಯ

ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಮನುವಾದಿ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಶನಿವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೆ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭಗವದ್ಗೀತೆಯನ್ನು ಪಠ್ಯಕ್ಕೆ ಸೇರಿಸಬೇಕೆಂದು ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಮನುವಾದಿಗಳಾಗಿದ್ದಾರೆ ಎಂದು ಆಪಾದಿಸಿದರು.

ಮನುವಾದಿ ಎಂದ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಎಚ್‌ಡಿಕೆ

ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರಿಸುವಂತೆ ಕೋರಿ ಕೇಂದ್ರದ ಶಿಕ್ಷಣ ಸಚಿವರಿಗೆ ಪತ್ರ ಬರೆದ ತಮ್ಮನ್ನು ಮನುವಾದಿ ಎಂದು ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.

ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ? ಹಾಗಾದರೆ, ಸಿದ್ದರಾಮಯ್ಯ ಅವರು ಮಕ್ಕಳಿಗೆ ಏನು ಬೋಧಿಸಲು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಮಂಡ್ಯದಲ್ಲಿ ಈ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ, ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರಿಸುವಂತೆ ಹೇಳಿದ್ದೇನೆ. ಆ ಬಗ್ಗೆ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಪತ್ರವನ್ನೂ ಬರೆದಿದ್ದೇನೆ. ನಾನೇನು ಮತಾಂತರ ಮಾಡಲಿಕ್ಕೆ ಈ ಹೇಳಿಕೆ ನೀಡಿಲ್ಲ. ಇಂದಿನ ಮಕ್ಕಳ ಬದುಕು, ಇವತ್ತಿನ ಸಮಾಜವನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಯಾವ ರೀತಿ ಬೆಳೆಸುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿ ಹೇಳಿದ್ದೇನೆ ಎಂದರು.

ತಂದೆ -ತಾಯಿ, ಅಣ್ಣ-ತಮ್ಮ ಕೊಲೆ ಮಾಡುವಂಥ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಬದುಕಿನ ನಿಯಮಾವಳಿ ಕಲಿಸುವುದು ಸರ್ಕಾರದ ಕರ್ತವ್ಯ. ರಾಜ್ಯದಲ್ಲಿ ಕೆಟ್ಟ ಬೆಳವಣಿಗೆಗಳು ನಡೆಯುತ್ತಿದೆ. ಹಾಸನದಲ್ಲಿ ತಾಯಿ ಆತ್ಮಹತ್ಯೆ ಮಾಡಿಕೊಂಡರು ಎಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈಗಿನ ಸಮಾಜ ವೇಗವಾಗಿ ಬೆಳೆಯುತ್ತಿದೆ. ತಾಯಿ ಹೃದಯ ಅನ್ನುವುದಿಲ್ಲ. ನಾನು ಚಿಕ್ಕವನಾಗಿದ್ದಾಗ ನೋಡಿದ್ದ ಸಮಾಜ ಈಗಿಲ್ಲ. ಮನುಷ್ಯ ಸಂಬಂಧಗಳನ್ನು ಬಲಪಡಿಸಿ ಸಮಾಜವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಭಗವದ್ಗೀತೆ ಬೋಧನೆ ಅಗತ್ಯವೆಂದು ಹೇಳಿದ್ದೇನೆ ಎಂದು  ಹೇಳಿದರು.

ಸಿದ್ದರಾಮಯ್ಯ ತಲೆಯಲ್ಲಿ ಇರುವುದು ಸಮಾಜದಲ್ಲಿ ಘರ್ಷಣೆ ಉಂಟು ಮಾಡುವುದಷ್ಟೆ. ಕಳೆದ 10 ವರ್ಷದಿಂದ ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯ ಮಜಾ‌‌ ಮಾಡಿದ್ದಾರೆ. ಅವರಿಂದ ಅಹಿಂದಕ್ಕೆ ಸಿಕ್ಕ ಕೊಡುಗೆ ಏನು? ಅಹಿಂದ ಸಮಸ್ಯೆ ಎಷ್ಟು ಬಗೆ ಹರಿಸಿದ್ದಾರೆ? ಅಹಿಂದಲ್ಲಿ ಅನೇಕ ಸಣ್ಣ ಜಾತಿ‌ಗಳಿವೆ. ಆ ಸಮಾಜಗಳಿಗೆ ಅವರ ಕೊಡುಗೆ ಏನು? ಅವರು ಯಾರಿಗೆ ಆದ್ಯತೆ ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News