ನಮ್ಮಿಂದ ಬಿಜೆಪಿ ಹಾಳಾಗಿಲ್ಲ; ಈಶ್ವರಪ್ಪ ನಾಲಿಗೆ ಬಿಗಿಹಿಡಿದು ಮಾತನಾಡಲಿ : ಬಿ.ಸಿ.ಪಾಟೀಲ್ ತಿರುಗೇಟು
ಬಿ.ಸಿ.ಪಾಟೀಲ್, ಈಶ್ವರಪ್ಪ
ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ಧ ಮಾಜಿ ಸಚಿವ ಬಿ.ಸಿ. ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದು, ಎಚ್ಚರಿಕೆಯಿಂದ ನಾಲಿಗೆ ಬಿಗಿಹಿಡಿದು ಮಾತನಾಡಬೇಕು. ನಮ್ಮಿಂದ ಬಿಜೆಪಿ ಹಾಳಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬಿ.ಸಿ.ಪಾಟೀಲ್, ನಾವೆಲ್ಲ ಬಿಜೆಪಿಗೆ ಬಂದಾಗ ನಿಮ್ಮ ಯಾವುದೇ ಶ್ರಮ ಇರಲಿಲ್ಲ. ನಮ್ಮ ಶ್ರಮದಿಂದಲೇ ನೀವು ಮಂತ್ರಿಯಾಗಿದ್ದೀರಿ. ಮಂತ್ರಿಯಾಗಿ ಎಲ್ಲಾ ಸೌಲಭ್ಯಗಳನ್ನು ಪಡೆದು ಈಗ ನಮ್ಮ ಮೇಲೆಯೇ ಗೂಬೆ ಕೂರಿಸುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.
ನಿಮ್ಮಂತವರಿಂದಲೇ ಬಿಜೆಪಿ ಹಾಳಾಗಿದೆ ಎಂದು ಹೇಳುವುದು ಸರಿಯಲ್ಲ. ನಾವು ಬಿಜೆಪಿಗೆ ಬರದೇ ಹೋಗಿದ್ದರೆ ನೀವು ಮಂತ್ರಿಯಾಗುತ್ತಿರಲಿಲ್ಲ. ಬೆಳಗಾವಿಯಲ್ಲಿ ಒಬ್ಬ ವ್ಯಕ್ತಿಯ ಆತ್ಮಹತ್ಯೆ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿಬಂದಿತ್ತು. ಈಗ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಿ ಎಂದು ಅವರು ತಿಳಿಸಿದ್ದಾರೆ.
ಯಾವಾಗ, ಯಾರಿಂದ, ಎಷ್ಟು ಹಣ ಪಡೆದಿದ್ದೇವೆ ಎಂಬ ಆರೋಪ ಮಾಡುತ್ತಿದ್ದೀರೋ ಅದನ್ನು ಸಾಬೀತುಪಡಿಸಬೇಕು. ಇಲ್ಲವಾದರೆ ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಬಿ.ಸಿ. ಪಾಟೀಲ್ ಸವಾಲು ಹಾಕಿದ್ದಾರೆ.