×
Ad

ಸಿಎಂ ಸಿದ್ದರಾಮಯ್ಯ ಭಾಷಣ ವೇಳೆ ಗದ್ದಲ ಎಬ್ಬಿಸಿದ ಬಿಜೆಪಿ ಕಾರ್ಯಕರ್ತೆಯರು

Update: 2025-04-28 15:24 IST

ಬೆಳಗಾವಿ: ಬೆಳಗಾವಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನಾ ಸಮಾವೇಶದಲ್ಲಿ‌ ಸಿಎಂ ಸಿದ್ದರಾಮಯ್ಯ ಅವರ ಭಾಷಣ ವೇಳೆ ಕೆಲ ಬಿಜೆಪಿ ಕಾರ್ಯಕರ್ತೆಯರು ಕಪ್ಪುಬಟ್ಟೆ ಪ್ರದರ್ಶಿಸಿ ಗದ್ದಲ ನಡೆಸಿದ ಘಟನೆ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಸಿಎಂ ಸಿದ್ದರಾಮಯ್ಯ, ಘಟನೆ ಸಂಬಂಧ ಪೊಲೀಸ್‌ ಅಧಿಕಾರಿಯನ್ನು ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿಯ ಭಾಷಣದ ಮೇಲೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿ, ವೇದಿಕೆಯತ್ತ ನುಗ್ಗಲು ಯತ್ನಿಸಿದ ಬಿಜೆಪಿ ಮಹಿಳಾ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದು ಪೊಲೀಸರು ಅಲ್ಲಿಂದ ವಾಹನದಲ್ಲಿ ಕರೆದುಕೊಂಡು ತೆರಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಾಹನಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ಅವಲೋಕಿಸಲು ವೇದಿಕೆಯಿಂದ ಇಳಿದು ಬಂದ ಲಕ್ಷ್ಮೀ ಹೆಬ್ಬಾಳ್ಕರ್, ಬಿಜೆಪಿ ಕಾರ್ಯಕರ್ತರನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬರಲು ಬಿಟ್ಟಿದ್ದು ಹೇಗೆ? ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಪೊಲೀಸ್ ಅಧಿಕಾರಿ ವಿರುದ್ಧ ಸಿಎಂ ಗರಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕಪ್ಪು ಬಟ್ಟೆ ಹಿಡಿದು ವೇದಿಕೆಯತ್ತ ನುಗ್ಗಲು ಯತ್ನಿಸಿ ಸಿಎಂ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಸಿಡಿಮಿಡಿಗೊಂಡ ಮುಖ್ಯಮಂತ್ರಿ, ಯಾರ್ರೀ ಬೆಳಗಾವಿ ಎಸ್ಪಿ? ಪ್ರಶ್ನಿಸಿದರು. ಆಗ ವೇದಿಕೆಗೆ ಬಂದ ಎಎಸ್ಪಿಯನ್ನು ಏಯ್ ಬಾರಯ್ಯ ಇಲ್ಲಿ ಏನ್ ಮಾಡುತ್ತಿದ್ದೀರಾ ನೀವು? ಅವರನ್ನೆಲ್ಲ ಇಲ್ಲಿಗೆ ಬರಲು ಹೇಗೆ ಬಿಟ್ರಿ? ಎಂದು ಏರು ಧ್ವನಿಯಲ್ಲೆ ತರಾಟೆಗೆ ತೆಗೆದುಕೊಂಡರು. ಆಗ ವೇದಿಕೆ ಮೇಲಿದ್ದ ಸಚಿವರಾದ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್ ಸೇರಿದಂತೆ ಇನ್ನಿತರರು ಮುಖ್ಯಮಂತ್ರಿಯನ್ನು ಸಮಾಧಾನಪಡಿಸಲು ಯತ್ನಿಸಿದರು.

ಭಾಷಣಕ್ಕೆ ಅಡ್ಡಿಪಡಿಸಿದಕ್ಕೆ ಬಿಜೆಪಿ-ಆರೆಸ್ಸೆಸ್ ‌ಗೆ ಧಿಕ್ಕಾರ ಕೂಗಿ ಸವಾಲೆಸೆದ ಸಿಎಂ, ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಾ, ಭಾರತೀಯರ ಬದುಕನ್ನು ಬೆಲೆ ಏರಿಕೆಯಲ್ಲಿ ಬೇಯಿಸುತ್ತಾ, ಭಾರತೀಯ ಸಮಾಜವನ್ನು ಛಿದ್ರಗೊಳಿಸುತ್ತಾ, ಬಿರುಕು ಮೂಡಿಸುತ್ತಾ ಜನದ್ರೋಹಿಯಾಗಿ ವರ್ತಿಸುತ್ತಿರುವುದು ಬಿಟ್ಟರೆ ಬೇರೆ ಏನು ಮಾಡಿದ್ದೀರಿ ತೋರಿಸಿ ಜನರಿಗೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News