ಸಚಿವ ಝಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
Update: 2025-12-24 15:56 IST
ಬೆಂಗಳೂರು, ಡಿ.24: ಅಕ್ರಮ ಆಸ್ತಿ ಗಳಿಕೆ ಆರೋಪ ಮೇಲೆ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಝ್ ಖಾನ್ ಅವರ ನಿವಾಸ ಸಹಿತ ಹತ್ತು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಸರ್ಫರಾಝ್ ಖಾನ್ ವಸತಿ ಇಲಾಖೆಗೆ ನಿಯೋಜನೆಗೊಂಡಿರುವ ಅಧಿಕಾರಿಯಾಗಿದ್ದು, ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 50ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಹಲಸೂರು ನಿವಾಸ, ಇತರ ಆರು ಮನೆಗಳು ಸೇರಿದಂತೆ ಒಟ್ಟು ಏಳು ಮನೆಗಳು, ಕೊಡಗಿನಲ್ಲಿರುವ ಎರಡು ಕಾಫಿ ಎಸ್ಟೇಟ್ ಗಳು ಮತ್ತು ಎಚ್.ಡಿ.ಕೋಟೆಯಲ್ಲಿನ ಒಂದು ರೆಸಾರ್ಟ್ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.