ಸದನದಲ್ಲಿ ಕೊಳಚೆ ನೀರು ಪ್ರದರ್ಶನ ಮಾಡಿದ ಜೆಡಿಎಸ್ ಸದಸ್ಯ; ಕಾರಣವೇನು?
ಸಮೃದ್ಧಿ ಮಂಜುನಾಥ್
ಬೆಂಗಳೂರು : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೆಸಿ ವ್ಯಾಲಿ ಯೋಜನೆಯ ಮೂಲಕ ಬೆಂಗಳೂರಿನ ಕೊಳಚೆ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಸದಸ್ಯ ಸಮೃದ್ಧಿ ಮಂಜುನಾಥ್ ಆರೋಪಿಸಿದಲ್ಲದೆ, ಕೊಳಚೆ ನೀರಿನ ಮಾದರಿ ಬಾಟಲ್ ನಲ್ಲಿ ವಿಧಾನಸಭೆಯಲ್ಲಿ ಪ್ರದರ್ಶಿಸಿದರು.
ಮಂಗಳವಾರ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಸಮೃದ್ಧಿ ಮಂಜುನಾಥ್ ಪ್ರಸ್ತಾಪಿಸಿ, ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಮಾತ್ರ ಸಂಸ್ಕರಿಸಿ ನೀಡಲಾಗುತ್ತಿದೆ. ಸಂಸ್ಕೃರಿಸಿದ ನೀರಿನಲ್ಲಿ ರಾಸಾಯನಿಕ ಮಿಶ್ರಿತ ನೊರೆ ಕಂಡು ಬರುತ್ತಿದೆ. ಈ ನೀರನ್ನು ಕೆರೆಗೆ ತುಂಬಿಸುವುದರಿಂದ ಕೆರೆಗಳಲ್ಲಿನ ಜಲಚರಗಳಿಗೆ ಹಾನಿ ಆಗುತ್ತಿವೆ. ಈ ನೀರು ಭೂಮಿಗೆ ಇಳಿಯುವುದರಿಂದ ಅಂತರ್ಜಲ ಕಲುಷಿತವಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ಈ ನೀರನ್ನು ಉಪಯೋಗ ಮಾಡುತ್ತಿರುವುದರಿಂದ ಬೆಳೆಗಳು ರೋಗಕ್ಕೆ ತುತ್ತಾಗುತ್ತಿದೆ, ಈ ಬೆಳೆಗಳನ್ನು ಸೇವಿಸುವದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಉಲ್ಲೇಖಿಸಿದರು.
ಈ ವೇಳೆ ಸಚಿವ ಕೃಷ್ಣಭೈರೇಗೌಡ ಅವರು, ಹದಗೆಟ್ಟ ಪರಿಸ್ಥಿತಿಯಲ್ಲಿ ನೀರು ಪೂರೈಕೆ ಮಾಡಿದ್ದೇವೆ. ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸುತ್ತೇವೆ. ಆದರೆ ಈ ಹಿಂದೆ ಭದ್ರಾ ಮೂಲಕ ನೀರು ಪೂರೈಕೆ ಮಾಡುತ್ತೇವೆ ಎಂದು ಹೇಳಿದವರು ಪೂರೈಕೆ ಮಾಡಿಲ್ಲ. ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುವುದರಿಂದ ಅನುಕೂಲ ಇಲ್ಲ. ಯಾವ ರೈತರಿಗೆ ತೊಂದರೆ ಆಗದಂತೆ ನೋಡುತ್ತೇವೆ. ವೈಜ್ಞಾನಿಕ ಆಧಾರದಲ್ಲಿ ಸಾಬೀತಾದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜ್, ಯಾವ ನೀರು ತಂದಿದ್ದಾರೆ ಗೊತ್ತಿಲ್ಲ ಎಂದರು.
ಈ ವೇಳೆ ಗರಂ ಆದ ಸಮೃದ್ದಿ ಮಂಜುನಾಥ್, ಕೈಯಲ್ಲಿದ್ದ ನೀರಿನ ಬಾಟಲಿ ಎಸೆದು ಅಸಮಾಧಾನ ವ್ಯಕ್ತಪಡಿಸಿದರು. ನೀವು ಈ ರೀತಿ ಉತ್ತರ ಕೊಡುವುದು ಸರಿಯಲ್ಲ. ಬೇಕಿದ್ದರೆ ಪರೀಕ್ಷೆ ಮಾಡಿಸಿ ಎಂದು ಗರಂ ಆದರು.
ವೈಜ್ಞಾನಿಕ ವರದಿ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ. ವಿದೇಶದ ತಂಡ ಹಾಗೂ ಕೇಂದ್ರದ ತಂಡ ಬಂದು ಕೆರೆ ನೋಡಿ ಹೊಗಳಿ ಹೋಗಿದ್ದಾರೆ. ಇದನ್ನು ತಮ್ಮಲ್ಲೂ ಅಳವಡಿಸಿಕೊಳ್ಳೋದಾಗಿ ಹೇಳಿದ್ದಾರೆ. ಸುಧಾರಣೆ ತರುವ ಕೆಲಸ ಮಾಡೋಣ. ಆಗಿರೋ ಕೆಲಸಕ್ಕೆ ಕಲ್ಲು ಹಾಕೋದು ಬೇಡ. ಯಾವುದೇ ತಂಡ ಬಂದು ಪರಿಶೀಲನೆ ಮಾಡಲಿ. ಅವರಿಗೆ ನಮ್ಮ ಸರ್ಕಾರ ಸಹಕಾರ ನೀಡಲಿದೆ ಎಂದು ಸಚಿವರು ಹೇಳಿದರು.