×
Ad

Bengaluru | ವಾಣಿಜ್ಯ ಸಿಲಿಂಡರ್ ಪೂರೈಕೆ ವ್ಯತ್ಯಯ; ನಾಳೆಯಿಂದ ಹೊಟೇಲ್‍ಗಳು ಬಂದ್ ಸಾಧ್ಯತೆ : ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ

Update: 2026-03-09 21:38 IST

ಸಾಂದರ್ಭಿಕ ಚಿತ್ರ | PC : gemini AI

ಬೆಂಗಳೂರು : ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯದಿಂದ ನಾಳೆ(ಮಾ.10)ಯಿಂದ ಬೆಂಗಳೂರು ನಗರದಲ್ಲಿನ ಹೊಟೇಲ್‍ಗಳನ್ನು ಬಂದ್ ಮಾಡುವ ಸಾಧ್ಯತೆಗಳಿವೆ ಎಂದು ಬೆಂಗಳೂರು ಹೊಟೇಲ್‍ಗಳ ಸಂಘ ಎಚ್ಚರಿಕೆ ನೀಡಿದೆ.

ಇರಾನ್ ಹಾಗೂ ಅಮೆರಿಕಾ-ಇಸ್ರೇಲ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಹಾಗೂ ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ಬೆಲೆ ಕ್ರಮವಾಗಿ 60 ರೂ. ಹಾಗೂ 115 ರೂ.ಗಳಷ್ಟು ಹೆಚ್ಚಾಗಿದೆ. ಹೀಗಾಗಿ ಸಿಲಿಂಡರ್‍ಗಳ ಪೂರೈಕೆ ನಿಲ್ಲಿಸಲಾಗಿದೆ.

ಸೋಮವಾರ ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಎಸ್. ಅವರು, ಹೊಟೇಲು ಉದ್ಯಮ ಅಗತ್ಯ ಸೇವೆ ಅಡಿಯಲ್ಲಿ ಬುರುವುದರಿಂದ ಇದನ್ನೇ ಅವಲಂಬಿಸಿರುವ ಜನಸಾಮಾನ್ಯರು, ಹಿರಿಯ ನಾಗರಿಕರು ವಿದ್ಯಾರ್ಥಿಗಳು, ವೈದ್ಯಕೀಯ ಹಾಗೂ ಇನ್ನಿತರ ಸೇವೆಯಲ್ಲಿರುವ ಹೆಚ್ಚಿನ ಜನರಿಗೆ ತಮ್ಮ ದಿನನಿತ್ಯದ ತಿಂಡಿ-ತಿನಿಸುಗಳಿಗೆ ತೊಂದರೆಯಾಗಲಿದೆ ಎಂದರು.

ಇದರ ಜೊತೆಗೆ ಅಡುಗೆ ಅನಿಲ ಸರಬರಾಜು ಮತ್ತೆ ಸಾಮಾನ್ಯ ಸ್ಥಿತಿಗೆ ಬರುವವರೆಗೆ ನಮ್ಮ ಹೊಟೇಲ್ ಉದ್ಯಮವೂ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ತೈಲ ಕಂಪೆನಿಗಳು 70 ದಿನಗಳ ವರೆಗೆ ಗ್ಯಾಸ್ ಸರಬರಾಜಿನಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲವೆಂದು ತಿಳಿಸಿದ್ದವು. ಆದರೆ, ಇದೀಗ ಏಕಾಏಕಿ ಸರಬರಾಜು ನಿಲ್ಲಿಸಿರುವುದು ಹೊಟೇಲ್ ಉದ್ಯಮಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಅವರು ಗಮನ ಸೆಳೆದರು.

ಆದುದರಿಂದ ಸಂಬಂಧಪಟ್ಟ ಕೇಂದ್ರ ಸಚಿವರು ಈ ವಿಚಾರದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ವಾಣಿಜ್ಯ ಸಲಿಂಡರ್ ಸರಬರಾಜನ್ನು ಪುನರಾರಂಭ ಮಾಡಿ ಹೊಟೇಲ್ ಉದ್ಯಮಕ್ಕೆ ಅಗತ್ಯ ಸಹಕಾರ ನೀಡಬೇಕು. ಅನಿಲ ಸಿಲಿಂಡರ್ ಪೂರೈಕೆ ಆಗುವ ವರೆಗೆ ಹೊಟೇಲ್‍ಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಸಿಲಿಂಡರ್ ದರ ಹೆಚ್ಚಳ ಸರಿಯಲ್ಲ: ‘ಕೇಂದ್ರ ಸರಕಾರ ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್‌ಗೆ 115 ರೂ.ಗಳನ್ನು ಹಾಗೂ ಮನೆ ಬಳಕೆಯ ಸಿಲಿಂಡರ್‌ ಗೆ 60ರೂ.ಹೆಚ್ಚಳ ಮಾಡಿದೆ. ಇದು ಬಹಳ ಹೆಚ್ಚಾಗಿದೆ ಎನ್ನುವುದು ಎಲ್ಲರ ಅಭಿಪ್ರಾಯ. ಕೇಂದ್ರ ಸರಕಾರ ಬೆಲೆ ಏರಿಕೆ ಮಾಡುತ್ತಿರುವುದು ಸರಿಯಲ್ಲ. ಸಿಲಿಂಡರ್ ಸರಬರಾಜಿನ ಕುರಿತು ಆತಂಕವಿರುವುದು ಬೇರೆ ವಿಷಯ. ಆದರೆ, ಎಲ್‍ಪಿಜಿ ದರ ಹೆಚ್ಚಳ ಎನ್ನುವುದು ಬೇರೆ ವಿಷಯ’

-ಸಿದ್ದರಾಮಯ್ಯ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News