ಬಳ್ಳಾರಿ: ಖಾಸಗಿ ವಸತಿ ಶಾಲೆಯಲ್ಲಿ ಸಹಪಾಠಿಗಳ ಮೇಲೆ ಹಲ್ಲೆ ಪ್ರಕರಣ; ಆರೋಪಿ ಬಾಲಕ ಪೊಲೀಸರ ವಶಕ್ಕೆ
ಸಾಂದರ್ಭಿಕ ಎ. ಐ. ಚಿತ್ರ
ಬಳ್ಳಾರಿ: ಜಿಲ್ಲೆಯ ಗೋನಾಳ ಪ್ರದೇಶದ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ವಾರ್ಡನ್ ಮೇಲೂ ಹಲ್ಲೆ ಮಾಡಿ ಓರ್ವ ವಿದ್ಯಾರ್ಥಿಯ ಹತ್ಯೆಗೆ ಕಾರಣವಾಗಿದ್ದ ಅಪ್ರಾಪ್ತ ಬಾಲಕನನ್ನು ನಗರದ ಶ್ರೀರಾಮಪುರ ಕಾಲೊನಿಯ ರೂಪನಗುಡಿಯಲ್ಲಿ ಸೋಮವಾರ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಹೊರವಲಯದ ತಾಳೂರು ರಸ್ತೆಯಲ್ಲಿರುವ 'ಗುರುಕುಲ ಕಾನ್ಸೆಪ್ಟ್ ಸ್ಕೂಲ್' ಎಂಬ ಸಿಬಿಎಸ್ ಇ ಶಾಲೆಯಲ್ಲಿ ಶನಿವಾರ ತಡರಾತ್ರಿ ವಿದ್ಯಾರ್ಥಿಗಳ ಮಧ್ಯೆ ಕ್ಷುಲ್ಲಕ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ವೇಳೆ ಆಕ್ರೋಶಗೊಂಡ ಒಂಭತ್ತನೇ ತರಗತಿಯ ವಿದ್ಯಾರ್ಥಿಯೋರ್ವ, ಕಬ್ಬಿಣದ ರಾಡ್ ನಿಂದ ತನ್ನ ಸಹಪಾಠಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ದಾಳಿಯ ತೀವ್ರತೆಗೆ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉಳಿದ ಏಳು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಲಾಟೆ ಬಿಡಿಸಲು ಬಂದ ಮಹಿಳಾ ವಾರ್ಡನ್ ಮೇಲೂ ಬಾಲಕ ದಾಳಿ ನಡೆಸಿದ್ದಾನೆ.
ಬಾಲಕನು ಹತಾಶೆಯಿಂದ ಈ ಕೃತ್ಯವೆಸಗಿರುವುದು ಗೊತ್ತಾಗಿದೆ. ಹಾಸ್ಟೆಲ್ ವಾತಾವರಣ ತನಗೆ ಇಷ್ಟವಿರಲಿಲ್ಲ ಎಂದು ಬಾಲಕ ಪ್ರಾಥಮಿಕ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಬಾಲಕನ ವಿಚಾರಣೆಯನ್ನು ಅತ್ಯಂತ ಎಚ್ಚರಿಕೆಯಿಂದ ಮಾಡುತ್ತಿದ್ದೇವೆ. ಇದಕ್ಕಾಗಿ ವೈದ್ಯಕೀಯ ತಜ್ಞರು, ಅಧಿಕಾರಿಗಳ ತಂಡ ರಚನೆ ಮಾಡಿಕೊಳ್ಳುತ್ತಿದ್ದೇವೆ. ಇದರಲ್ಲಿ ಪೊಲೀಸರು, ಮಾನಸಿಕ ತಜ್ಞರು, ವೈದ್ಯರು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಇರಲಿದ್ದಾರೆ. ಈ ಬಗ್ಗೆ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ವಿಮ್ಸ್) ಜತೆಗೆ ಮಾತನಾಡಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ ತಿಳಿಸಿದರು.
‘ಘಟನೆಗೆ ಕಾರಣವೇನು ಎಂಬುದರ ತನಿಖೆ ನಡೆಯುತ್ತಿದೆ. ಶಾಲೆಯವರು ಹಾಸ್ಟೆಲ್‌ಗೆ ಅನುಮತಿ ಪಡೆದಿದ್ದರೇ ಎಂಬುದರ ಬಗ್ಗೆ ಪರಿಶೀಲಿಸಲು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಪತ್ರ ಬರೆಯಲಾಗಿದೆ. ಶಾಲೆಯ ವೈಫಲ್ಯದ ಬಗ್ಗೆಯೂ ತನಿಖೆ ಮಾಡುತ್ತೇವೆ’ ಎಂದು ಹೇಳಿದರು.
ಘಟನೆ ಬಳಿಕ ಬಾಲಕ ಬಳ್ಳಾರಿ ನಗರದಲ್ಲೇ ಇದ್ದ. ದೇವಸ್ಥಾನಗಳಲ್ಲಿ ನೀಡುವ ಪ್ರಸಾದ ಸೇವಿಸುತ್ತಾ ಎರಡು ದಿನ ಕಳೆದಿದ್ದ ಎನ್ನಲಾಗಿದೆ.