ವಾಟ್ಸ್ ಆ್ಯಪ್ನಲ್ಲಿ ಬಸ್ ಟಿಕೆಟ್ ಬುಕ್ಕಿಂಗ್ ಸೌಲಭ್ಯ
ಬೆಂಗಳೂರು : ಪ್ರಯಾಣಿಕರಿಗೆ ಮತ್ತಷ್ಟು ಸುಲಭ, ಸರಳ ಹಾಗೂ ಅನುಕೂಲಕರ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‍ಗಳಲ್ಲಿ ಪ್ರಯಾಣಿಸಲು ಮೊಬೈಲ್ ಆಪ್ಲಿಕೇಶನ್ ಹಾಗೂ ವಾಟ್ಸ್ ಆ್ಯಪ್ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಪರಿಚಯಿಸಲಾಗಿದೆ.
ವಿಧಾನಸೌಧದಲ್ಲಿ ಆಯೋಜಿಸಲಾದ 100 ದಿನಗಳ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನವೀಕೃತ ಮೊಬೈಲ್ ಆಪ್ಲಿಕೇಶನ್ ಹಾಗೂ ವಾಟ್ಸ್ ಆ್ಯಪ್ ಟಿಕೆಟಿಂಗ್ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಆಧುನಿಕ ಹಾಗೂ ಬಳಕೆದಾರ ಸ್ನೇಹಿ ಇಂಟರ್ ಫೇಸ್ ಹೊಂದಿರುವ ಈ ವೇದಿಕೆಯು ಪ್ರಯಾಣಿಕರಿಗೆ ಏಕೀಕೃತ ಹಾಗೂ ಸುಗಮ ಪ್ರಯಾಣ ಅನುಭವವನ್ನು ಒದಗಿಸುವ ಉದ್ದೇಶ ಹೊಂದಿದೆ. ಮೊಬೈಲ್ ಆಪ್ಲಿಕೇಶನ್‍ನಲ್ಲಿ ಸುರಕ್ಷಿತವಾಗಿ ಲಾಗಿನ್ ಮಾಡಬಹುದು. ಪ್ರಯಾಣಿಕರ ಗುರುತಿನ ದೃಢೀಕರಣ, ಹಿಂದಿನ ಬುಕ್ಕಿಂಗ್‍ಗಳ ವಿವರ ವೀಕ್ಷಣೆ ಹಾಗೂ ವಹಿವಾಟುಗಳ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಯಾಣಿಕರ ದೂರುಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಿ, ದೂರುಗಳ ಸ್ಥಿತಿಯನ್ನು ಪರಿಶೀಲಿಸುವುದು.
ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ ವಾಟ್ಸ್ ಆ್ಯಪ್ ಮೂಲಕ ಬಸ್‍ಗಳ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಪ್ರಯಾಣಿಕರು 63649 40880 ವಾಟ್ಸ್ ಆ್ಯಪ್ ಸಂಖ್ಯೆಗೆ ಸಂದೇಶವನ್ನು ಕಳುಹಿಸುವ ಮೂಲಕ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಬಹುದು. ನಂತರ ವಾಟ್ಸ್ ಆ್ಯಪ್ ನಲ್ಲಿಯೇ ಲಭ್ಯವಾಗುವ ಸಂವಾದಾತ್ಮಕ ವ್ಯವಸ್ಥೆಯು ಟಿಕೆಟ್ ಕಾಯ್ದಿರಿಸುವಿಕೆಯ ಸಂಪೂರ್ಣ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.