ಜೈವಿಕವಾಗಿ ವಿಘಟನೆಯಾಗುವ ಕೈಚೀಲಕ್ಕೆ ಸಂಪುಟ ಸಮ್ಮತಿ: ಸಚಿವ ಈಶ್ವರ್ ಖಂಡ್ರೆ
ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು: ಜೈವಿಕವಾಗಿ ವಿಘಟನೆಯಾಗುವ ಕೈಚೀಲ (ಕ್ಯಾರಿ ಬ್ಯಾಗ್)ಗಳ ತಯಾರಿಕೆ, ದಾಸ್ತಾನು, ಮಾರಾಟಕ್ಕೆ ಅವಕಾಶ ಆಗುವಂತೆ 2016ರ ಅಧಿಸೂಚನೆಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ವ್ಯಾಖ್ಯಾನಕ್ಕೆ ತಿದ್ದುಪಡಿ ತರಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016ರ ಸರಕಾರದ ಅಧಿಸೂಚನೆಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ, ಪ್ಲಾಸ್ಟಿಕ್ ಹಾಳೆಗಳ ತಯಾರಿಕೆ, ಮಾರಾಟ, ದಾಸ್ತಾನು ನಿಷೇಧಿಸಲಾಗಿತ್ತು. ಆದರೆ ಇತ್ತೀಚೆಗೆ ಸಸ್ಯಜನ್ಯ ಕೈಚೀಲಗಳ ಆವಿಷ್ಕಾರವಾಗಿದ್ದು, ಇದು 180 ದಿನಗಳಲ್ಲಿ ಜೈವಿಕವಾಗಿ ವಿಘಟನೆಯಾಗುತ್ತದೆ, ಹೀಗಾಗಿ ಇದರ ಮಾರಾಟಕ್ಕೆ ಅನುಕೂಲವಾಗುವಂತೆ ತಿದ್ದುಪಡಿ ತರಲಾಗಿದ್ದು, ಸಚಿವ ಸಂಪುಟ ಸಮ್ಮತಿ ನೀಡಿದೆ ಎಂದರು.
ಈ ಹಿಂದೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ತಾವು 2016ರ ಅಧಿಸೂಚನೆಗೆ ತಿದ್ದುಪಡಿ ತಂದು, ಕೇಂದ್ರ ಪರಿಸರ ಇಲಾಖೆಯ 2021ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾಗಿ ಈಶ್ವರ್ ಖಂಡ್ರೆ ಸ್ಮರಿಸಿದರು.
ಪರಿಸರಕ್ಕೆ ಹಾನಿಕಾರಕವಲ್ಲದ ಮತ್ತು ಜೈವಿಕವಾಗಿ ವಿಘಟನೆಯಾಗುವ (ಬಯೋ ಡೀಗ್ರೇಡಬಲ್-ಕಂಪೋಸ್ಟಬಲ್) ಕೈಚೀಲಗಳನ್ನು ಮತ್ತು ಮೊದಲೇ ಪ್ಯಾಕ್ ಮಾಡಿ ಸೀಲ್ ಮಾಡಿದ ಪ್ಯಾಕೇಜಿಂಗ್ ಪ್ಲಾಸ್ಟಿಕ್ ಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲಾಗಿದೆ. ಇದು ಕೇಂದ್ರ ಸರಕಾರದ ಆದೇಶಕ್ಕೆ ಅನುಗುಣವಾಗಿದೆ ಎಂದು ಅವರು ತಿಳಿಸಿದರು.
ಶೆಟ್ಟಿಹಳ್ಳಿ ವನ್ಯಜೀವಿಧಾಮದ ಗಡಿ ಪರಿಷ್ಕರಣೆ: ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕುಗಳ ವ್ಯಾಪ್ತಿಯಲ್ಲಿರುವ ಶೆಟ್ಟಿಹಳ್ಳಿ ಅರಣ್ಯದ ಗಡಿ ಪರಿಷ್ಕರಣೆಗೆ ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ. 1974ರಲ್ಲಿ ಶೆಟ್ಟಿಹಳ್ಳಿ ವನ್ಯ ಜೀವಿಧಾಮ ಎಂದು ಅಧಿಸೂಚನೆ ಮಾಡಿ, ಇದರ ವಿಸ್ತೀರ್ಣವನ್ನು 395.60 ಚ.ಕಿ.ಮೀ ಎಂದು ನಿಗದಿ ಮಾಡಲಾಗಿತ್ತು ಎಂದು ಈಶ್ವರ್ ಖಂಡ್ರೆ ಹೇಳಿದರು.
ಮೂಲ ಅಧಿಸೂಚನೆಯ ವಿಸ್ತೀರ್ಣಕ್ಕೆ ಚ್ಯುತಿಯಾಗದಂತೆ ಶೆಟ್ಟಿಹಳ್ಳಿ ಅರಣ್ಯದ ಗಡಿಯನ್ನು 396.165 ಚದರ ಕಿಲೋಮೀಟರ್ ವಿಸ್ತೀರ್ಣ ಉಳಿಸಿಕೊಂಡು ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಲು ಸಮ್ಮತಿಸಲಾಗಿದೆ. 1974ರ ನವೆಂಬರ್ ನಲ್ಲಿ ವನ್ಯಜೀವಿಧಾಮ ಎಂದು ಅಧಿಸೂಚನೆ ಆದಾಗ, ಅದರಲ್ಲಿ ರಸ್ತೆ, ಬಸ್ ನಿಲ್ದಾಣ, ಜನವಸತಿ ಪ್ರದೇಶ, ಪಟ್ಟಾಭೂಮಿ, ಶರಾವತಿ ಮುಳುಗಡೆ ಪುನರ್ವಸತಿಗಾಗಿ ಗುರುತಿಸಿರುವ ಪ್ರದೇಶ ಇತ್ಯಾದಿಯೂ ಸೇರ್ಪಡೆಯಾಗಿತ್ತು ಎಂದು ಅವರು ಮಾಹಿತಿ ನೀಡಿದರು.
ಜನರಿಗೆ ಆಗುತ್ತಿದ್ದ ಅನಾನುಕೂಲ ತಪ್ಪಿಸಲು ಗಡಿ ಪರಿಷ್ಕರಣೆ ಮಾಡಲು ಇಲಾಖೆ ತೀರ್ಮಾನಿಸಿ, ಇದಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಪಡೆಯಲಾಗಿತ್ತು ಎಂದು ಈಶ್ವರ್ ಖಂಡ್ರೆ ವಿವರಿಸಿದರು.