ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು : ರಾಜ್ಯದಲ್ಲಿ ವಿಮಾನಯಾನ ಸಂಪರ್ಕವನ್ನು ವಿಸ್ತರಿಸುವುದು, ಪ್ರಾದೇಶಿಕ ವಿಮಾನಯಾನವನ್ನು ಉತ್ತೇಜಿಸುವುದು ಹಾಗೂ ವಿಮಾನ ನಿಲ್ದಾಣಗಳು ಮತ್ತು ಇತರ ವಿಮಾನಯಾನ ಮೂಲಸೌಕರ್ಯಗಳ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶದಿಂದ ರೂಪಿಸಿರುವ ಕರ್ನಾಟಕ ರಾಜ್ಯ ನಾಗರಿಕ ವಿಮಾನಯಾನ ನೀತಿ-2026ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚೆ ನಡೆಸಲಾಯಿತು. ಆನಂತರ, ಈ ನೀತಿಯ ಅನುಷ್ಠಾನದಿಂದ ರಾಜ್ಯದ ವಿವಿಧ ಭಾಗಗಳಿಗೆ ವಿಮಾನ ಸಂಪರ್ಕ ಸುಧಾರಿಸುವುದರ ಜೊತೆಗೆ, ಪ್ರಾದೇಶಿಕ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ ಎಂದು ಅನುಮೋದನೆ ನೀಡಲಾಯಿತು.

ಕೇಂದ್ರ ಸರಕಾರದ ರಾಷ್ಟ್ರೀಯ ನಾಗರಿಕ ವಿಮಾನಯಾನ ನೀತಿ-2016ಕ್ಕೆ ಅನುಗುಣವಾಗಿ ರೂಪಿಸಿರುವ ಈ ನೀತಿಯು ರಾಜ್ಯದಲ್ಲಿ ವಿಮಾನಯಾನ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ನೀತಿ ಚೌಕಟ್ಟನ್ನು ಒದಗಿಸಲಿದೆ. ವಿಮಾನಯಾನ ಸಂಪರ್ಕ ಕಡಿಮೆ ಇರುವ ಹಾಗೂ ಸೇವೆಗಳಿಲ್ಲದ ಪ್ರದೇಶಗಳಿಗೆ ವಿಮಾನ ಸಂಪರ್ಕ ಕಲ್ಪಿಸುವುದರ ಜೊತೆಗೆ, ಪ್ರಾದೇಶಿಕ ವಿಮಾನಯಾನ ಸೇವೆಗಳನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ನೀತಿಯಡಿ ಪ್ರಾದೇಶಿಕ ಸಂಪರ್ಕ ಯೋಜನೆ, ಕಾರ್ಯಸಾಧ್ಯತೆಯ ಅಂತರ ನಿಧಿ ಹಾಗೂ ಅಗತ್ಯ ಹಣಕಾಸು ನೆರವಿನ ಮೂಲಕ ವಿಮಾನಯಾನ ಸೇವೆಗಳ ವಿಸ್ತರಣೆಗೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ. ರಾಜ್ಯದ ಎರಡನೆ ಮತ್ತು ಮೂರನೆ ಹಂತದ ನಗರಗಳಲ್ಲಿ ವಿಮಾನ ನಿಲ್ದಾಣಗಳು, ವಿಮಾನ ಪಟ್ಟಿಗಳು, ಹೆಲಿಪೋರ್ಟ್‍ಗಳು ಮತ್ತು ಜಲವಿಮಾನ ನಿಲ್ದಾಣಗಳ ಅಭಿವೃದ್ಧಿಗೂ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಈ ಮೂಲಸೌಕರ್ಯಗಳ ಅಭಿವೃದ್ಧಿಯ ಮೂಲಕ ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸುವುದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಹಾಗೂ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸುವುದು ನಿರೀಕ್ಷಿಸಲಾಗಿದೆ.

ವಿಮಾನಯಾನ ಸೇವೆಗಳ ಅನುಷ್ಠಾ ನ, ಹಣಕಾಸು ನೆರವು, ಕಾರ್ಯಾಚರಣೆ ಮತ್ತು ಸಂಬಂಧಿತ ಪ್ರಕ್ರಿಯೆಗಳನ್ನು ವ್ಯವಸ್ಥಿತಗೊಳಿಸಲು ಅಗತ್ಯ ಮಾರ್ಗಸೂಚಿಗಳು ಹಾಗೂ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ರೂಪಿಸುವುದಕ್ಕೂ ನೀತಿ ಅವಕಾಶ ಕಲ್ಪಿಸುತ್ತದೆ ಎಂದು ಸಚಿವ ಸಂಪುಟದಲ್ಲಿ ಉಲ್ಲೇಖಿಸಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor