ಕುಮಾರಸ್ವಾಮಿ ಕೇಂದ್ರದಲ್ಲಿ ನಿರುದ್ಯೋಗಿ ಮಂತ್ರಿ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಕೇಂದ್ರದಲ್ಲಿ ಯಾರಾದರೂ ನಿರುದ್ಯೋಗಿ ಮಂತ್ರಿ ಇದ್ದರೆ, ಮೊದಲ ಸ್ಥಾನ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಜನರಿಂದ ಲೋಕಸಭೆಗೆ ಆಯ್ಕೆಯಾಗಿ ಎರಡೂವರೆ ವರ್ಷಗಳಾದರೂ, ಕೇಂದ್ರ ಸರಕಾರದಿಂದ ಕರ್ನಾಟಕ ರಾಜ್ಯಕ್ಕೆ ಯಾವುದೇ ಯೋಜನೆಯಾಗಲಿ, ಬಂಡವಾಳವನ್ನಾಗಲಿ ತಂದಿಲ್ಲ ಎಂದು ಆಕ್ಷೇಪಿಸಿದರು.
ಕೇಂದ್ರದಲ್ಲಿ ಕುಮಾರಸ್ವಾಮಿ ಅವರ ಮಾತುಗಳು ನಡೆಯುವುದಿಲ್ಲ. ಹೀಗಾಗಿ ರಾಜ್ಯದ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಸಚಿವರನ್ನು ಟೀಕಿಸುವ ಕೆಲಸದಲ್ಲಿ ತೊಡಗಿದ್ದಾರೆ. ಅವರು ನಿಂದನೆ ಮಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಅವರು ತಮ್ಮ ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು.
‘ಆರೆಸ್ಸೆಸ್ನ ನೂತನ ಅಚ್ಚುಮೆಚ್ಚಿನ ವ್ಯಕ್ತಿಯೊಬ್ಬ(ಎಚ್.ಡಿ.ಕುಮಾರಸ್ವಾಮಿ) ತನಿಖೆಗೆ ಆಗ್ರಹಿಸುತ್ತಾ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ್ದಾರೆ. ಆದರೆ ತನಿಖೆ ಆರಂಭವಾಗುತ್ತಿದ್ದಂತೆಯೇ, ಅವರು ನಗರ ಪೊಲೀಸ್ ಆಯುಕ್ತರ ಬಳಿ ಓಡಿಹೋಗಿ, ‘ನನ್ನ ಪಕ್ಷದ ಕಾರ್ಯಕರ್ತರ ವಿರುದ್ಧ ತನಿಖೆ ನಡೆಸಬೇಡಿ’ ಎಂದು ಅಂಗಲಾಚುತ್ತಾರೆ. ಅವರ ಪ್ರಕಾರ ಇತರರಿಗೆ ಹೊಣೆಗಾರಿಕೆ. ಆದರೆ, ತಮ್ಮವರಿಗೆ ಮಾತ್ರ ವಿನಾಯಿತಿ’
-ಪ್ರಿಯಾಂಕ್ ಖರ್ಗೆ, ಗೃಹ ಸಚಿವ