ಸಾಂದರ್ಭಿಕ ಚಿತ್ರ | PC : Image by magnific

ಬೆಂಗಳೂರು: ರಾಜ್ಯಾದ್ಯಂತ ಸಿಹಿ ತಿಂಡಿ ತಯಾರಿಕಾ ಘಟಕಗಳು ಹಾಗೂ ಮಾರಾಟ ಮಳಿಗೆಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಗುರುವಾರ ವಿಶೇಷ ತಪಾಸಣಾ ಅಭಿಯಾನ ನಡೆಸಿದ್ದು, ಒಟ್ಟು 125 ಆಹಾರ ಮಾದರಿಗಳನ್ನು ಸಂಗ್ರಹಿಸಿದೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 10 ಸಿಹಿ ತಯಾರಿಕಾ ಘಟಕಗಳು ಹಾಗೂ ಆಹಾರ ವಹಿವಾಟುದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ಪ್ರಕಟನೆ ಹೊರಡಿಸಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್ ನಿರ್ದೇಶನದ ಮೇರೆಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗ ಈ ಕಾರ್ಯಾಚರಣೆ ನಡೆಸಿದೆ. ರಾಜ್ಯದಾದ್ಯಂತ 80 ಸಿಹಿ ತಯಾರಿಕಾ ಹಾಗೂ ಮಾರಾಟ ಘಟಕಗಳನ್ನು ತಪಾಸಣೆ ನಡೆಸಲಾಗಿದೆ. ತಪಾಸಣೆ ವೇಳೆ ಕೆಲವು ಘಟಕಗಳಲ್ಲಿ ಆಹಾರ ತಯಾರಿಕೆ ಮತ್ತು ಸಂಗ್ರಹಣಾ ಸ್ಥಳಗಳನ್ನು ಅನೈರ್ಮಲ್ಯಕರವಾಗಿ ನಿರ್ವಹಿಸುತ್ತಿರುವುದು ಕಂಡುಬಂದಿದೆ ಎಂದಿದ್ದಾರೆ.

ಆಹಾರ ನಿರ್ವಹಣೆ ಮಾಡುವ ಸಿಬ್ಬಂದಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಹೊಂದಿರದಿರುವುದು ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‍ಎಸ್‍ಎಸ್‍ಎಐ) ಪರವಾನಗಿ ಅಥವಾ ನೋಂದಣಿ ಪಡೆಯದಿರುವುದೂ ಪತ್ತೆಯಾಗಿದೆ. ಸಂಗ್ರಹಿಸಿದ 125 ಆಹಾರ ಮಾದರಿಗಳನ್ನು ಗುಣಮಟ್ಟ ಮತ್ತು ಆಹಾರ ಸುರಕ್ಷತಾ ಮಾನದಂಡಗಳ ಪಾಲನೆ ಪರಿಶೀಲಿಸಲು ಸಂಬಂಧಿಸಿದ ಸರಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ 2011ರ ನಿಯಮಾವಳಿಗಳ ಅನ್ವಯ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುವ ಸಿಹಿ ತಯಾರಿಕಾ ಘಟಕಗಳು ಮತ್ತು ಮಾರಾಟ ಮಳಿಗೆಗಳ ವಿರುದ್ಧ ನಿರಂತರ ತಪಾಸಣೆ ನಡೆಸಿ, ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor