ಎಸ್ಸಿ-ಎಸ್ಟಿ ಕಲ್ಯಾಣಕ್ಕೆ ವಿಷನ್ ಗ್ರೂಪ್ ರಚನೆ : ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಯಾವ ರೀತಿ ಹೊಸ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ತೀರ್ಮಾನಿಸಲು ‘ವಿಷನ್ ಗ್ರೂಪ್’ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಸಂಜೆ ವಿಕಾಸಸೌಧದ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ಬಜೆಟ್ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಬಜೆಟ್ನಲ್ಲಿ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ಈ ಸಮುದಾಯಗಳ ನಾಯಕರ ಬಗ್ಗೆ ಚರ್ಚಿಸಲಾಗಿದೆ. ಹೀಗಾಗಿ, ವಿಷನ್ ಗ್ರೂಪ್ ಅನ್ನು ರಚಿಸುತ್ತೇನೆ ಎಂದು ತಿಳಿಸಿದರು.
ಸಾಮಾಜಿಕ ಆಡಿಟ್: ಎಸ್ಸಿಎಸ್ಪಿ/ ಟಿಎಸ್ಪಿ ವಿಚಾರಗಳ ಬಗ್ಗೆ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದ್ದು, ನಾವು ಪ್ರಣಾಳಿಕೆಯಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಿದ್ಧತೆ ಮಾಡಲಾಗುತ್ತಿದೆ. ಕೆಲವು ಯೋಜನೆಗಳು ಓವರ್ ಲ್ಯಾಪಿಂಗ್ ಆಗುತ್ತಿರುವ ಬಗ್ಗೆ ನಮ್ಮ ನಾಯಕರು ಗಮನಸೆಳೆದಿದ್ದಾರೆ. ಇಷ್ಟು ವರ್ಷಗಳ ಕಾಲ ಎಸ್ಸಿಎಸ್ಪಿ/ ಟಿಎಸ್ಪಿ ಮೂಲಕ ನೀಡಿರುವ ಅನುದಾನ ಯಾವ ರೀತಿ ಪರಿಣಾಮ ಬೀರಿದೆ ಎಂದು ಅಧ್ಯಯನ ಮಾಡಲು ಪ್ರತಿಷ್ಠಿತ ಸಂಸ್ಥೆಗಳಿಂದ ಸಾಮಾಜಿಕ ಆಡಿಟ್ ಮಾಡಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್ಸಿಎಸ್ಪಿ/ ಟಿಎಸ್ಪಿ ಮೂಲಕ 2025-26ನೇ ಸಾಲಿನಲ್ಲಿನ 42,503 ಕೋಟಿ ರೂ., ಹಾಗೂ ಪ್ರಸಕ್ತ ಸಾಲಿನ 44,631 ಕೋಟಿ ರೂಪಾಯಿ ಅನ್ನು 34 ಇಲಾಖೆಗಳ 451 ಯೋಜನೆಗಳಿಗೆ ಹಂಚಿಕೆ ಮಾಡಲಾಗಿದೆ. ನಮ್ಮ ಶಾಸಕರು ಹಾಗೂ ಸಚಿವರು ಹೊಸ ಆಲೋಚನೆ, ಯೋಜನೆಗಳ ಬಗ್ಗೆ ಸಲಹೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಡಾ.ಜಿಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರೂ ಸೇರಿದಂತೆ ನಮ್ಮ ಎಸ್ಸಿ,ಎಸ್ಟಿ ಶಾಸಕರುಗಳು ಎರಡು ದಿನಗಳ ಕಾಲ ಚರ್ಚೆ ಮಾಡಿ ಏನಾದರೂ ಬದಲಾವಣೆ ಮಾಡಲು ಸಾಧ್ಯವೇ? ಎಂದು ಆರ್ಥಿಕ ಇಲಾಖೆ ಜತೆಗೂಡಿ ಚರ್ಚೆ ಮಾಡಿ ನಮಗೆ ವರದಿ ನೀಡಲಿದ್ದಾರೆ ಎಂದು ತಿಳಿಸಿದರು.
ಎಸ್ಸಿಎಸ್ಪಿ/ ಟಿಎಸ್ಪಿ ಯೋಜನೆಯ 44,631 ಕೋಟಿ ರೂ., ಸರಿಯಾದ ರೀತಿಯಲ್ಲಿ ಸೇರಬೇಕು ಎಂಬುದು ನಮ್ಮ ಸರಕಾರದ ಚಿಂತನೆಯಾಗಿದ್ದು, ಇದಕ್ಕೆ ನಮ್ಮ ಸರಕಾರ ಬದ್ಧವಾಗಿದೆ ಎಂದ ಅವರು, 2001ರಿಂದ 2025ರವರೆಗೆ 19,115 ಬ್ಯಾಕ್ ಲಾಗ್ ಹುದ್ದೆಗಳು ಖಾಲಿ ಇದ್ದು, 17,793 ಹುದ್ದೆಗಳು ಭರ್ತಿಯಾಗಿದ್ದು 1574 ಹುದ್ದೆಗಳು ಬಾಕಿ ಇದ್ದು, ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ, sಸಚಿವರಾದ ರುದ್ರಪ್ಪ ಲಮಾಣಿ, ಟಿ.ರಘುಮೂರ್ತಿ, ಕೆ.ಎಸ್.ಬಸವಂತಪ್ಪ, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಇದ್ದರು.
ಐಕ್ಯತಾ ಸಮಾವೇಶ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮಾವೇಶ ಮಾಡಲು ಸರಕಾರ ತೀರ್ಮಾನಿಸಿದ್ದು, ನಮ್ಮ ನಾಯಕರು ಚರ್ಚೆ ಮಾಡಿ ಈ ಕಾರ್ಯಕ್ರಮ ಎಲ್ಲಿ ನಡೆಯಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡಲಿದೆ. ಇದು ಐಕ್ಯತಾ ಸಮಾವೇಶವಾಗಿದ್ದು, ನಾವು ಚುನಾವಣೆಗೂ ಮುನ್ನ ಏನು ಮಾತು ನೀಡಿದ್ದೆವು, ನಾವು ಏನೆಲ್ಲಾ ಈಡೇರಿಸಿದ್ದೇವೆ ಎಂಬುದನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಅದನ್ನು ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಎಸ್ಸಿಎಸ್ಪಿ/ ಟಿಎಸ್ಪಿ ಯೋಜನೆಯಡಿ ಮೀಸಲಿಟ್ಟಿರುವ 44,631 ಕೋಟಿ ಖರ್ಚಾಗುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಎಲ್ಲ ಇಲಾಖೆಗಳಲ್ಲೂ ಈ ಹಣ ಖರ್ಚಾಗುತ್ತಿದೆ. ಒಂದು ಇಲಾಖೆಯಲ್ಲಿ 2600 ಕೋಟಿ ರೂ., ಬಾಕಿ ಉಳಿದುಕೊಂಡಿತ್ತು. ಈ ವರ್ಷ ಅದನ್ನು ವರ್ಗಾವಣೆ ಮಾಡಿ ಖರ್ಚು ಮಾಡಲಾಗಿದೆ. ಜನರಿಗಾಗಿ ಅನುಷ್ಠಾ ನಗೊಳ್ಳುವ ಯೋಜನೆ ರೂಪಿಸಬೇಕು, ಯೋಜನೆಗಳು ಜನರಿಗೆ ತಲುಪಬೇಕು. ಆದರೆ, ಈ ಅನುದಾನವನ್ನು ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎನ್ನುವ ಆರೋಪ ಸರಿಯಲ್ಲ. ನಮ್ಮ ಕಾನೂನು ಏನಿದೆ ಅದರ ವ್ಯಾಪ್ತಿಯಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಉಲ್ಲೇಖಿಸಿದರು.
ಅಭಿವೃದ್ಧಿ ಪರಿಷತ್ ಸಭೆಯ ಪ್ರಮುಖ ತೀರ್ಮಾನಗಳು: *ಕೇಂದ್ರ ಪುರಸ್ಕೃ ತ ಯೋಜನೆಗಳಡಿ 2025-26ನೆ ಸಾಲಿನಲ್ಲಿ ಬಿಡುಗಡೆ ಮಾಡದೆ ಬಾಕಿಯುಳಿಸಿರುವ 1,937 ಕೋಟಿ ರೂ., ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲು ತೀರ್ಮಾನ
*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ನಿಖರ ಸಂಖ್ಯೆಗೆ ಅನುಗುಣವಾಗಿ ಎಸ್ಸಿಎಸ್ಪಿ/ ಟಿಎಸ್ಪಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಇ ಆಡಳಿತ ಇಲಾಖೆಯಲ್ಲಿ ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ಫಲಾನುಭವಿಗಳ ಸಂಖ್ಯೆಯನ್ನು ನಿಗದಿಪಡಿಸಲು ಸೂಚನೆ.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿರುವ ಎಲ್ಲ ಸಮುದಾಯಗಳಿಗೂ ಸಮಾನವಾಗಿ ಅನುದಾನ ಹಂಚಿಕೆಯಾಗುವಂತೆ ಖಾತ್ರಿಪಡಿಸಬೇಕು.
*ಪ್ರತಿಯೊಬ್ಬ ಫಲಾನುಭವಿಯ ಛಾಯಾಚಿತ್ರ ಸೇರಿದಂತೆ ಸಂಪೂರ್ಣ ವಿವರ ವೆಬ್ಸೈಟ್ನಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಯೋಜನೆಗಳ ಲಾಭ ಪ್ರತಿಯೊಬ್ಬರಿಗೂ ದೊರೆಯಬೇಕು.
*ಫಲಾನುಭವಿಗಳ ಫೋಟೋ ಹಾಗೂ ವಿಡಿಯೋ ದಾಖಲಾಗಬೇಕು. ಆ ಮೂಲಕ ಪಾರದರ್ಶಕತೆ ತಂದು ಯಾವುದೇ ಕಾರಣಕ್ಕೂ ಯೋಜನೆಗಳ ದುರುಪಯೋಗವಾದಂತೆ ನೋಡಿಕೊಳ್ಳಬೇಕು.
* ಎಸ್ಸಿಎಸ್ಪಿ/ಟಿಎಸ್ಪಿ ಅಡಿ ನಿಗಧಿಪಡಿಸಲಾಗಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ಕಚೇರಿ ವೆಚ್ಚಕ್ಕಾಗಿ ಬಳಕೆಯಾಗಬಾರದು.