ಚಿತ್ರದುರ್ಗ : ನಿಗಮ-ಮಂಡಳಿಗಳಿಗೆ ನೇಮಕ ಮಾಡಿ ರಾಜ್ಯ ಸರಕಾರ ಹೊರಡಿಸಿರುವ ನೂತನ ಪಟ್ಟಿ ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ವಿವಾದ ಸೃಷ್ಟಿಸಿದೆ. ಕಾಂಗ್ರೆಸ್‌ನಿಂದ ಸ್ಥಾನ ನಿರೀಕ್ಷಿಸಿದ್ದ ಕಾರ್ಯಕರ್ತರಿಗೆ ನಿರಾಸೆಯಾದರೆ, ಬಿಜೆಪಿ ಹಿನ್ನೆಲೆಯ ಮುಖಂಡರೊಬ್ಬರಿಗೆ ಸ್ಥಾನ ಒಲಿದು ಬಂದಿದೆ.

ರೇಷ್ಮೆ ಅಭಿವೃದ್ಧಿ ನಿಗಮದ ನಿರ್ದೇಶಕರ ಹುದ್ದೆಗೆ ನಗರದ ಪ್ರಮುಖರಾದ ಲೀಲಾಧರ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿದೆ. ಸರಕಾರ ಹೊರತಂದಿರುವ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದ್ದೇ ತಡ, ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿದೆ.

ಠಾಕೂರ್ ಅವರು ಸುದೀರ್ಘ ಕಾಲ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡವರು. ಬಿಜೆಪಿಯ ನಗರ ಘಟಕದ ಸಾರಥ್ಯವನ್ನೂ ವಹಿಸಿದ್ದವರು ಎನ್ನಲಾಗಿದೆ. ಈ ಹಿನ್ನೆಲೆ ಇರುವವರಿಗೆ ಆಡಳಿತಾರೂಢ ಕಾಂಗ್ರೆಸ್‌ನಿಂದ ಸ್ಥಾನಮಾನ ಲಭಿಸಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ನೇಮಕದ ಹಿಂದೆ ಸ್ಥಳೀಯ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಪ್ರಭಾವ ಇದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಪಪ್ಪಿ ಅವರಿಗೆ ಅತ್ಯಂತ ಹತ್ತಿರದ ವಲಯದಲ್ಲಿ ಠಾಕೂರ್ ಇದ್ದಾರೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಈ ಹುದ್ದೆ ಅವರತ್ತ ಹರಿದುಬಂದಿದೆ ಎಂಬುದು ಕಾರ್ಯಕರ್ತರ ಆರೋಪ.

ಇದರಿಂದ ಕೈ ಪಾಳಯದಲ್ಲಿ ಅಸಮಾಧಾನದ ಹೊಗೆ ಆವರಿಸಿದೆ. ಚುನಾವಣೆಯಿಂದ ಹಿಡಿದು ಸಂಘಟನೆಯವರೆಗೆ ಪಕ್ಷಕ್ಕಾಗಿ ಬೆವರು ಸುರಿಸಿದ ನಿಷ್ಠಾವಂತರನ್ನು ಬಿಟ್ಟು, ಬೇರೆಯವರಿಗೆ ಮಣೆ ಹಾಕಿದ್ದು ಏಕೆ ಎಂದು ಹಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor