ನರೇಂದ್ರ ಮೋದಿ |Photo Credit : PTI 

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ(ನ.13) ರಾಜ್ಯಕ್ಕೆ ಭೇಟಿ ನೀಡಲಿದ್ದು, ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗ, ಮಂಗಳೂರಿನಲ್ಲಿ ದೇಶದ ಅತಿದೊಡ್ಡ ಭೂಗತ ಎಲ್‍ಜಿಪಿ ಸಂಗ್ರಹಾಗಾರ, ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಗಳು, ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ ಪ್ರೆಸ್‍ಗೆ ಚಾಲನೆ ನೀಡಲಿದ್ದಾರೆ. ಅಲ್ಲದೇ, ಮೈಸೂರಿನಲ್ಲಿ ಭಾರತದ ಮೊದಲ ಎಲ್‍ಇಡಿ ಡೋಮ್ ಪ್ಲಾನಿಟೋರಿಯಂ ಉದ್ಘಾಟಿಸಲಿದ್ದಾರೆ.

ಬೆಂಗಳೂರಿನಲ್ಲಿ ಪ್ರಧಾನಮಂತ್ರಿ: ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ (ಎಸ್-ವ್ಯಾಸ) ಪ್ರಶಾಂತಿ ಕುಟೀರದ ಸ್ವರ್ಣ ಜಯಂತಿ ಆಚರಣೆಯಲ್ಲಿ ಬೆಳಗ್ಗೆ 10.45ರ ಸುಮಾರಿಗೆ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ, ಸ್ವರ್ಣ ಜಯಂತಿ ಆಡಳಿತ ಮಂಡಳಿಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಕೇರಳಂನ ತಿರುವನಂತಪುರಂನಲ್ಲಿ ಎಸ್-ವ್ಯಾಸ ಆಫ್-ಕ್ಯಾಂಪಸ್‍ಗೆ ಚಾಲನೆ ನೀಡಲಿದ್ದಾರೆ.

ಸುಮಾರು 3,470 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಕಾಳೇನ ಅಗ್ರಹಾರದಿಂದ ತಾವರೇಕೆರೆವರೆಗಿನ ನಮ್ಮ ಮೆಟ್ರೋದ ಪಿಂಕ್ ಲೈನ್ ಅನ್ನು ಮಧ್ಯಾಹ್ನ 12.45ರ ಸುಮಾರಿಗೆ ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಈ ಹೊಸ ಮಾರ್ಗವು ನಗರ ಸಂಪರ್ಕವನ್ನು ಹೆಚ್ಚಿಸಲಿದೆ, ದೈನಂದಿನ ಪ್ರಯಾಣವನ್ನು ಸುಗಮಗೊಳಿಸಲಿದೆ, ಪ್ರಯಾಣದ ಸಮಯವನ್ನು ತಗ್ಗಿಸಲಿದೆ ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಬಲಪಡಿಸಲಿದೆ.

ಆನಂತರ, ಮಧ್ಯಾಹ್ನ 1.15ರ ಸುಮಾರಿಗೆ 15,600 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಅದರಂತೆ, 4,450 ಕೋಟಿ ರೂ. ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಲಾದ ಕೊಪ್ಪಳ-2 ಮತ್ತು ಗದಗ-2 ರಲ್ಲಿ ನವೀಕರಿಸಬಹುದಾದ ಇಂಧನ ವಲಯಗಳ ಸಂಯೋಜನೆಗಾಗಿ ಪ್ರಸರಣ ಯೋಜನೆ (ಹಂತ-2)ಯನ್ನು ಉದ್ಘಾಟಿಸಲಿದ್ದಾರೆ.

1,370 ಕೋಟಿ ರೂ. ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಲಾದ ಬೀದರ್‍ನ ಸೌರ ವಿದ್ಯುತ್ ವಲಯದ ಪ್ರಸರಣ ಯೋಜನೆಯನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ. 3,450 ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯಲ್ಲಿ ದಾವಣಗೆರೆ/ಚಿತ್ರದುರ್ಗ ಮತ್ತು ಬಳ್ಳಾರಿ ನವೀಕರಿಸಬಹುದಾದ ಇಂಧನ ವಲಯಗಳ ಸಂಯೋಜನೆಗಾಗಿ ಪ್ರಸರಣ ಯೋಜನೆಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ದಾವಣಗೆರೆ ಮತ್ತು ಬಳ್ಳಾರಿಯಲ್ಲಿ ಹೆಚ್ಚುವರಿ ನವೀಕರಿಸಬಹುದಾದ ಇಂಧನ ಸಾಮಥ್ರ್ಯದ ಸಂಯೋಜನೆಗಾಗಿ ಪ್ರಸರಣ ವ್ಯವಸ್ಥೆ ಬಲವರ್ಧನೆ ಯೋಜನೆಗೆ 1,100 ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯಲ್ಲಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ದೇಶದ ಅತಿದೊಡ್ಡ ಭೂಗತ ಎಲ್‍ಜಿಪಿ ಸಂಗ್ರಹಾಗಾರ: ಮಂಗಳೂರಿನಲ್ಲಿ 850 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಭಾರತದ ಅತಿದೊಡ್ಡ ಭೂಗತ ಎಲ್‍ಪಿಜಿ ಸಂಗ್ರಹಾಗಾರವನ್ನು ಪ್ರಧಾನಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 80 ಸಾವಿರ ಮೆಟ್ರಿಕ್ ಟನ್ ಶೇಖರಣಾ ಸಾಮಥ್ರ್ಯದೊಂದಿಗೆ, ಈ ಸೌಲಭ್ಯವು ಭಾರತದ ಎಲ್‍ಪಿಜಿ ಶೇಖರಣಾ ಮೂಲಸೌಕರ್ಯವನ್ನು ಗಮನಾರ್ಹವಾಗಿ ಬಲಪಡಿಸಲಿದೆ.

ಈ ಯೋಜನೆಯು ನವ ಮಂಗಳೂರು ಬಂದರನ್ನು ಮುಖ್ಯ ಟರ್ಮಿನಲ್‍ಗೆ ಬೆಸೆಯುವ 9.4 ಕಿಮೀ ಎಲ್‍ಪಿಜಿ ಪೈಪ್‍ಲೈನ್ ಅನ್ನು ಸಹ ಒಳಗೊಂಡಿದ್ದು, ಎಲ್‍ಪಿಜಿಯ ಸಮರ್ಥ ಸಾಗಣೆ ಮತ್ತು ಶೇಖರಣೆಯನ್ನು ಸುಗಮಗೊಳಿಸುತ್ತದೆ. ಮ್ಯಾಂಗಲೋರ್ ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‍ನ  ಬೆಂಗಳೂರಿನ ದೇವನಗೊಂದಿ ಮಾರ್ಕೆಟಿಂಗ್ ಟರ್ಮಿನಲ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 330 ಕೋಟಿ ರೂ. ಹೂಡಿಕೆಯಲ್ಲಿ ನಿರ್ಮಿಸಲಾದ ಈ ಅತ್ಯಾಧುನಿಕ ಸೌಲಭ್ಯವು ಕರ್ನಾಟಕದಲ್ಲಿ ಪೆಟ್ರೋಲಿಯಂ ಉತ್ಪನ್ನ ಶೇಖರಣೆ ಮತ್ತು ವಿತರಣಾ ಮೂಲಸೌಕರ್ಯವನ್ನು ಬಲಪಡಿಸಲಿದೆ.

ಬೆಂಗಳೂರಿನ ಹರಳಕುಂಟೆಯಲ್ಲಿ ಗೇಲ್  ಸಂಸ್ಥೆಯ ಸಂಕೋಚಿತ ಜೈವಿಕ ಅನಿಲ ಸ್ಥಾವರಕ್ಕೆ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸ್ಥಾವರವು ದಿನಕ್ಕೆ ಸುಮಾರು 300 ಟನ್ ಪುರಸಭೆಯ ಘನತ್ಯಾಜ್ಯವನ್ನು ಸಂಸ್ಕರಿಸಿ 12.6 ಟನ್ ಶುದ್ಧ ಸಂಕೋಚಿತ ಜೈವಿಕ ಅನಿಲವನ್ನು ಉತ್ಪಾದಿಸಲಿದೆ. ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಮರು ಅಭಿವೃದ್ಧಿಗೊಂಡ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳನ್ನು ಉದ್ಘಾಟಿಸಲಿದ್ದಾರೆ.

284 ಕಿ.ಮೀ. ಗದಗ-ಹೋಟಗಿ ದ್ವಿಗುಣಗೊಳಿಸುವ ಯೋಜನೆಯ ಭಾಗವಾಗಿರುವ 45 ಕಿಮೀ ಬಾಗಲಕೋಟೆ-ವಂಡಾಲ್ ರೈಲು ಮಾರ್ಗ ದ್ವಿಗುಣಗೊಳಿಸುವ ವಿಭಾಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

55 ಕಿ.ಮೀ. ಉದ್ದದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ರೈಲು ವಿಭಾಗದ ವಿದ್ಯುದ್ದೀಕರಣವನ್ನು ಪ್ರಧಾನಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾ ನಡುವೆ ವೇಗದ ಹಾಗೂ ಆಧುನಿಕ ರೈಲು ಸಂಪರ್ಕವನ್ನು ಒದಗಿಸುವ ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ.

ಮೈಸೂರಿನಲ್ಲಿ ಪ್ರಧಾನಮಂತ್ರಿ: ದೇಶದಲ್ಲಿ, ಪ್ಲಾನಿಟೋರಿಯಂ ತಂತ್ರಜ್ಞಾನ ಮತ್ತು ಖಗೋಳಶಾಸ್ತ್ರ ಶಿಕ್ಷಣದಲ್ಲಿ ಪ್ರಮುಖ ಪ್ರಗತಿಯನ್ನು ಗುರುತಿಸುವ ‘ಕಾಸ್ಮೋಸ್-ಮೈಸೂರು' ಪ್ಲಾನಿಟೋರಿಯಂ ಅನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಭಾರತೀಯ ಅಸ್ಟ್ರೋಫಿಜಿಕ್ಸ್ ಸಂಸ್ಥೆ  ನಿರ್ಮಿಸಿರುವ ಕಾಸ್ಮೋಸ್-ಮೈಸೂರು ಭಾರತದ ಮೊದಲ ಎಲ್‍ಇಡಿ ಡೋಮ್ ಪ್ಲಾನಿಟೋರಿಯಂ ಆಗಿದೆ. ಈ ಅತ್ಯಾಧುನಿಕ ಸೌಲಭ್ಯವು 4.2 ಕೋಟಿ ಪ್ರತ್ಯೇಕ ಎಲ್‍ಇಡಿಗಳನ್ನು ಹೊಂದಿರುವ ಸುಮಾರು 6,150 ಪ್ಯಾನಲ್‍ಗಳನ್ನು ಒಳಗೊಂಡ 15-ಮೀಟರ್ ಓರೆಯಾದ ಡೋಮ್ ಅನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor