ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯರಿಂದ ಸಂತಾಪ
ಸೂರಜ್ ಹೆಗ್ಡೆ
ಬೆಂಗಳೂರು : ಐಸಿಸಿ ಕಾರ್ಯದರ್ಶಿ ಹಾಗೂ ಗ್ಯಾರಂಟಿ ಸಮಿತಿ ರಾಜ್ಯ ಉಪಾಧ್ಯಕ್ಷರಾಗಿದ್ದ ಸೂರಜ್ ಹೆಗ್ಡೆ ಅವರ ನಿಧನಕ್ಕೆ ಸಿಎಂ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸೂರಜ್ ಹೆಗ್ಡೆ ಅವರ ಅಗಲಿಕೆ ಸುದ್ದಿ ಕೇಳಿ ನನ್ನ ಮನಸ್ಸಿಗೆ ಆಘಾತವಾಗಿದೆ. ಚಿಕ್ಕ ವಯಸ್ಸಿಗೆ ಅವರು ನಮ್ಮನ್ನು ಅಗಲಿದ್ದಾರೆ ಎಂಬುದನ್ನು ನಂಬಲೇ ಆಗುತ್ತಿಲ್ಲ. ಸೂರಜ್ ಅವರು ಎಐಸಿಸಿ ಕಾರ್ಯದರ್ಶಿಯಾಗಿ ತಮಿಳುನಾಡು ಹಾಗೂ ಪುದುಚೆರಿ ರಾಜ್ಯದ ಉಸ್ತುವಾರಿಯಾಗಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸೂರಜ್ ಹೆಗ್ಡೆ ಅವರು ತಮ್ಮ ತಾತ ದೇವರಾಜ ಅರಸು ಅವರಂತೆ ಹಿಂದುಳಿದ ವರ್ಗಗಳು, ಕಾರ್ಮಿಕರ ಹಕ್ಕು, ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿದ್ದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿಗಳಾಗಿ ಪಕ್ಷದ ಸಂಘಟನೆ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ಈಗ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೂರಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸೂರಜ್ ಹೆಗ್ಡೆ ಅಗಲಿಕೆ ಕಾಂಗ್ರೆಸ್ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟ: ಸಿದ್ದರಾಮಯ್ಯ
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಯುವ ನಾಯಕರಾಗಿದ್ದ ಸೂರಜ್ ಹೆಗ್ಡೆ ಅವರ ಹಠಾತ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸಂಘಟನೆಯಲ್ಲಿ ರಾಷ್ಟ್ರಮಟ್ಟದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ಸೂರಜ್ ಹೆಗ್ಡೆ ಅವರು ಎಐಸಿಸಿ ಕಾರ್ಯದರ್ಶಿ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಹಠಾತ್ ಅಗಲಿಕೆ ನನಗೆ ಆಘಾತ ಉಂಟುಮಾಡಿದೆ ಎಂದು ತಿಳಿಸಿದ್ದಾರೆ.
ನಮ್ಮ ನಾಡಿನ ಹೆಮ್ಮೆಯ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಮೊಮ್ಮಗನಾಗಿದ್ದ ಸೂರಜ್ ಅವರು ಜನಪರ ರಾಜಕಾರಣದ ಪರಂಪರೆಯನ್ನು ಬದ್ಧತೆ ಮತ್ತು ಕಾಳಜಿಯಿಂದ ಮುಂದುವರಿಸಿಕೊಂಡು ಬರುತ್ತಿದ್ದರು. ರಾಜಕೀಯದಲ್ಲಿ ಅವರಿಗೆ ಇನ್ನಷ್ಟು ಅವಕಾಶಗಳು ಒದಗಿ ಬರಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಅವರು ನಮ್ಮನ್ನಗಲಿ ಹೋಗಿರುವುದು ಕಾಂಗ್ರೆಸ್ ಪಕ್ಷ ಮತ್ತು ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸೂರಜ್ ಅವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಸಂತಾಪ ಸೂಚಿಸಿದ್ದಾರೆ.
ಸೂರಜ್ ಹೆಗ್ಡೆ ನಿಧನ ಕಾಂಗ್ರೆಸ್‌ಗೆ ತುಂಬಲಾರದ ನಷ್ಟ: ಬಿ.ಕೆ.ಹರಿಪ್ರಸಾದ್
ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ ಅವರ ನಿಧನ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ಬಳಿಕ ಮಾತನಾಡಿದ ಅವರು, ಸೂರಜ್ ಹೆಗ್ಡೆ ಅವರನ್ನು ಸಣ್ಣ ವಯಸ್ಸಿನಿಂದಲೇ ನೋಡಿದ್ದೇನೆ. ಅವರ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರೊಂದಿಗೆ ನನಗೆ ಆತ್ಮೀಯ ಒಡನಾಟವಿತ್ತು. ಅರಸು ಅವರು ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಲೆಜೆಂಡರಿ ವ್ಯಕ್ತಿತ್ವ ಹೊಂದಿದ್ದರು. ಅವರ ಮೊಮ್ಮಗನಾಗಿದ್ದರೂ ಸೂರಜ್ ಹೆಗ್ಡೆ ಅವರಿಗೆ ಯಾವುದೇ ಅಹಂ ಇರಲಿಲ್ಲ ಎಂದು ಹೇಳಿದರು.
ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದ್ದ ಅವರು, ಎಐಸಿಸಿ ಮಟ್ಟದ ಕಾರ್ಯದರ್ಶಿಯಾಗಿ ಬೆಳೆದು ಪಕ್ಷಕ್ಕೆ ಸೇವೆ ಸಲ್ಲಿಸಿದ್ದರು. ಅವರು ರಾಹುಲ್ ಗಾಂಧಿ ಅವರಿಗೆ ಅತ್ಯಂತ ಆಪ್ತರಾಗಿದ್ದರು. ಸೂರಜ್ ಅವರ ಅಗಲಿಕೆ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಕಾಂಗ್ರೆಸ್ ಪಕ್ಷಕ್ಕೂ ದೊಡ್ಡ ನಷ್ಟವಾಗಿದೆ ಎಂದು ಹರಿಪ್ರಸಾದ್ ಅಭಿಪ್ರಾಯಪಟ್ಟರು.
ಸೂರಜ್ ಹೆಗ್ಡೆ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ” ಎಂದು ಅವರು ಸಂತಾಪ ಸೂಚಿಸಿದರು.
ಸೂರಜ್ ಹೆಗ್ಡೆ ಅಗಲಿಕೆ ವೈಯಕ್ತಿಕವಾಗಿ ನನಗೆ ಹಾಗೂ ಕುಟುಂಬಕ್ಕೆ ತುಂಬಲಾರದ ನಷ್ಟ: ಸಚಿವ ಪ್ರಿಯಾಂಕ್ ಖರ್ಗೆ
ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ ಅವರ ನಿಧನಕ್ಕೆ ಸಚಿವ ಪ್ರಿಯಾಂಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಆಘಾತಕಾರಿ ಸುದ್ದಿಯೊಂದು ನನ್ನಲ್ಲಿ ತೀವ್ರ ನೋವನ್ನುಂಟು ಮಾಡಿದೆ. ಆತ್ಮೀಯ ಗೆಳೆಯ ಎನ್ನುವುದಕ್ಕಿಂತಲೂ ಮಿಗಿಲಾಗಿ, ನಮ್ಮ ಕುಟುಂಬಕ್ಕೆ ಆತ್ಮೀಯರಾಗಿ ನನ್ನ ಸಹೋದರನಂತೆ ಇದ್ದ ಸೂರಜ್ ಹೆಗ್ಡೆಯವರು ಹೀಗೆ ಏಕಾಏಕಿ ನಮ್ಮೆಲ್ಲರನ್ನು ಬಿಟ್ಟು ಹೊರಟ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಸ್ನೇಹ ರಾಜಕೀಯ ವಲಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಅವರು ನಮ್ಮ ಇಡೀ ಕುಟುಂಬದ ಸದಸ್ಯರಂತಿದ್ದರು ಎಂದು ತಿಳಿಸಿದ್ದಾರೆ.
ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದಲೇ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ ಬೆಳೆದಿದ್ದ ಸೂರಜ್ ಹೆಗ್ಡೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಪಕ್ಷ ಸಂಘಟನೆಗೆ ತಮ್ಮ ಬದುಕನ್ನು ಸಮರ್ಪಿಸಿದ್ದರು. ನಾನು ಕಂಡ ಅತ್ಯುತ್ತಮ ಸಂಘಟಕ, ಸ್ನೇಹಜೀವಿ ಹಾಗೂ ಸೌಜನ್ಯದ ವ್ಯಕ್ತಿತ್ವ ಅವರದು. ಅವರ ಸಾವಿನಿಂದ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ನಷ್ಟವಾಗಿದ್ದು, ವೈಯಕ್ತಿಕವಾಗಿ ನನಗೆ ಹಾಗೂ ನಮ್ಮ ಕುಟುಂಬಕ್ಕೆ ಆತ್ಮೀಯರೊಬ್ಬರನ್ನು ಕಳೆದುಕೊಂಡ ನೋವು ಕಾಡುತ್ತಿದೆ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಮೊಮ್ಮಗನಾಗಿ ಅವರ ತತ್ವಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಸೂರಜ್ ಹೆಗ್ಡೆಯವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಿಯಾಂಕ್ ಖರ್ಗೆ ಸಂತಾಪ ಸೂಚಿಸಿದ್ದಾರೆ.
ಸೂರಜ್ ಹೆಗ್ಡೆ ಅಕಾಲಿಕ ನಿಧನ ನೋವಿನ ಸಂಗತಿ: ಬಿ.ವೈ.ವಿಜಯೇಂದ್ರ
ನಾಡಿನ ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಮೊಮ್ಮಗರಾದ ಸೂರಜ್ ಹೆಗ್ಡೆ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಕನಸುಗಳು ಮತ್ತು ಆಶಯಗಳೊಂದಿಗೆ ಮುಂದೆ ಸಾಗುತ್ತಿದ್ದ ಸೂರಜ್ ಹೆಗ್ಡೆ ಅವರು ಇಷ್ಟು ಬೇಗ ನಮ್ಮನ್ನೆಲ್ಲ ಅಗಲಿರುವುದು ಅತ್ಯಂತ ಆಘಾತಕಾರಿ ಮತ್ತು ನೋವಿನ ಸಂಗತಿಯಾಗಿದೆ. ಇನ್ನೂ ದೀರ್ಘಕಾಲ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಬೇಕಾಗಿದ್ದ ಅವರು ಅಕಾಲಿಕವಾಗಿ ವಿಧಿವಶರಾಗಿರುವುದು ತುಂಬಲಾರದ ನಷ್ಟವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಪರಮಾತ್ಮನು ದಿವಂಗತ ಸೂರಜ್ ಹೆಗ್ಡೆ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರು, ಬಂಧು-ಬಳಗ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಸಂತಾಪ ಸೂಚಿಸಿದ್ದಾರೆ.