×
Ad

15,441.17 ಕೋಟಿ ರೂ.ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ : ಸಿಎಂ ಸಿದ್ದರಾಮಯ್ಯ

Update: 2025-05-28 22:01 IST

ಬೆಂಗಳೂರು : ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 65ನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಟ್ಟು 15,441.17 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಸುಮಾರು 5277 ಜನರಿಗೆ ಉದ್ಯೋಗ ಲಭ್ಯವಾಗಲಿದೆ ಎಂದು ತಿಳಿಸಿದರು.

ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ನಾಲ್ಕು ಹೊಸ/ ವಿಸ್ತರಣಾ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ಹಾಗೂ ಎರಡು ಹೆಚ್ಚುವರಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ಸೇರಿದಂತೆ ಅನುಷ್ಠಾನದ ವಿವಿಧ ಹಂತದಲ್ಲಿರುವ ಒಟ್ಟು 10 ತಿದ್ದುಪಡಿ ಯೋಜನಾ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಶ್ರೀ ಸಿಮೆಂಟ್ ಲಿಮಿಟೆಡ್ ಸಂಸ್ಥೆಯ 2406 ಕೋಟಿ ರೂ.ಗಳ ಹೊಸ ಬಂಡವಾಳ ಹೂಡಿಕೆಯ ಯೋಜನೆಯಿಂದ 300 ಉದ್ಯೋಗ, ದಾಲ್ಮಿಯಾ(ಭಾರತ್) ಲಿ. ಸಂಸ್ಥೆಯ 3 ಸಾವಿರ ಕೋಟಿ ರೂ.ಹೂಡಿಕೆಯಿಂದ 570 ಉದ್ಯೋಗ ಹಾಗೂ ದಾಲ್ಮಿಯಾ(ಭಾರತ್) ಲಿ. ಸಂಸ್ಥೆಯ 3,020 ಕೋಟಿ ರೂ.ಹೂಡಿಕೆಯಿಂದ 570 ಉದ್ಯೋಗ, ಎಂವೀ ಎನರ್ಜಿ ಪ್ರೈ.ಲಿ ಸಂಸ್ಥೆಯ 5495 ಕೋಟಿ ರೂ. ಹೂಡಿಕೆಯಿಂದ 2508 ಉದ್ಯೋಗ ಸೃಷ್ಟಿಯಾಗಲಿದೆ. ನೂತನ ಹೂಡಿಕೆ ಪ್ರಸ್ತಾವನೆಗಳಿಂದ ಒಟ್ಟು 13921 ಕೋಟಿ ರೂ. ಹೂಡಿಕೆಯಾಗಲಿದ್ದು, 3948 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಚಲುವರಾಯಸ್ವಾಮಿ ಪ್ರಿಯಾಂಕ ಖರ್ಗೆ, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News