×
Ad

ʼಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಮೀಸಲಾತಿ ಬೇಡಿಕೆʼ ನ್ಯಾಯ ಒದಗಿಸಲು ಸರಕಾರ ಬದ್ಧ : ಸಿಎಂ ಸಿದ್ದರಾಮಯ್ಯ

Update: 2025-10-31 15:15 IST

ಬೆಂಗಳೂರು : "ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸರಕಾರ ಬದ್ಧವಾಗಿದ್ದು, ಶೇಕಡ 1ರಷ್ಟು ಮೀಸಲಾತಿಯನ್ನು ಯಾವ ರೀತಿಯಲ್ಲಿ ಕಲ್ಪಿಸಬಹುದು ಎಂಬ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಒಳಮೀಸಲಾತಿ ಕುರಿತು ಅಲೆಮಾರಿ ಒಕ್ಕೂಟದ ಪದಾಧಿಕಾರಿಗಳ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಿ ಮಾತನಾಡಿದ ಸಿಎಂ, "ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸುಧಾರಣೆಗೆ ಎಸ್ ಸಿ ಪಿ /ಟಿ ಎಸ್ ಪಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇ ನಮ್ಮ ಸರಕಾರ . ಪ್ರತಿಯೊಬ್ಬರಿಗೂ ಪರಿಹಾರ ಸಿಗಲಿ ಎನ್ನುವುದೇ ಸರಕಾರದ ಉದ್ದೇಶ. ಯಾವುದೇ ಜಾತಿಯೊಳಗೆ ಇನ್ನೊಂದನ್ನು ಸೇರಿಸುವ , ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡುವ ಉದ್ದೇಶ ಸರಕಾರಕ್ಕಿಲ್ಲ. ಇದಕ್ಕೊಂದು ಪರಿಹಾರ ಹುಡುಕಿ, ನ್ಯಾಯ ಒದಗಿಸಲಾಗುವುದು" ಎಂದರು.

"ಒಳಮೀಸಲಾತಿ ಕಲ್ಪಿಸಲು ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಈಗ ಉಂಟಾಗಿರುವ ಗೊಂದಲಗಳಿಗೂ ಆದ್ಯತೆ ಮೇರೆಗೆ ಪರಿಹಾರ ಕಂಡುಕೊಳ್ಳಲು ಸರಕಾರ ಬದ್ಧವಾಗಿದೆ" ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅಲೆಮಾರಿ ಸಮುದಾಯಗಳ ಮನವಿ :

ನಿವೃತ್ತ ನ್ಯಾ.ನಾಗಮೋಹನ್  ದಾಸ್ ಅವರ ಶಿಫಾರಸಿನಂತೆ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ  ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಶೇಕಡ 1ರಷ್ಟು ಮೀಸಲಾತಿ ಕಲ್ಪಿಸಲು ಆದ್ಯತೆ ನೀಡುವಂತೆ, ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ  ಪ್ರತ್ಯೇಕ ನಿಗಮ ರಚನೆ  ಹಾಗೂ ಅಲೆಮಾರಿ ಸಮುದಾಯಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವ ಕುರಿತಂತೆ ಮುಖ್ಯಮಂತ್ರಿ ಅವರಲ್ಲಿ ನಿಯೋಗ ಮನವಿ ಮಾಡಿತು.

ಸಭೆಯಲ್ಲಿ ಸಚಿವರಾದ ಎಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಮಾಜಿ ಸಚಿವರಾದ ಎಚ್.ಆಂಜನೇಯ, ವಿವಿಧೆಡೆಗಳಿಂದ ಆಗಮಿಸಿದ್ದ ಅಲೆಮಾರಿ ಸಮುದಾಯಗಳ ಮುಖಂಡರುಗಳು ಉಪಸ್ಥಿತರಿದ್ದರು.

ಸರಕಾರದ ವಿರುದ್ಧ ಮೊಳಗಿದ ಘೋಷಣೆ: ‘ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರವಾಗಿ ಅಲೆಮಾರಿ ಸಮುದಾಯದ ಜೊತೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಸಭೆ ಮುಗಿಸಿ ತೆರಳಿದ ಬಳಿಕ ಕೆಲವು ಮುಖಂಡರು ಅಸಮಾಧಾನ ಹೊರಹಾಕಿದ್ದು, ವಿಧಾನಸೌಧದ ಒಳಗೆಯೇ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ದೃಶ್ಯ ಕಂಡಿತು.

ಸುಪ್ರೀಂ ಕೋರ್ಟ್ ಆದೇಶದಂತೆ ಅಲೆಮಾರಿ ಸಮುದಾಯಕ್ಕೆ ನ್ಯಾಯ ಸಿಗಬೇಕಿದ್ದು, ಅದು ರಾಜ್ಯ ಸರಕಾರದಿಂದ ನಮಗೆ ಸಿಗುತ್ತಿಲ್ಲ. ಸಾಮಾಜಿಕ ನ್ಯಾಯದಂತೆ ಅಲೆಮಾರಿ ಸಮಾಜಕ್ಕೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಕೊಡಿ ಎಂದು ಘೋಷಣೆ ಕೂಗಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News