×
Ad

ಕನ್ನಡದ ವಾತಾವರಣ ನಿರ್ಮಾಣ ಅವಶ್ಯಕ ಹಾಗೂ ಅನಿವಾರ್ಯ : ಸಿಎಂ ಸಿದ್ದರಾಮಯ್ಯ

‘ಬೆಂಗಳೂರು ಹಬ್ಬ-2026’ಕ್ಕೆ ಚಾಲನೆ

Update: 2026-01-16 21:18 IST

ಬೆಂಗಳೂರು : ಕನ್ನಡ ನಮ್ಮ ಭಾಷೆ, ನಮ್ಮ ರಾಜ್ಯ ಭಾಷೆ. ಇಲ್ಲಿ ಯಾರೇ ಬರಲಿ, ಯಾವುದೆ ರಾಜ್ಯದಿಂದ ಬಂದಿರಲಿ. ಇಲ್ಲಿ ನೆಲೆಸುವವರು ಕನ್ನಡ ಭಾಷೆಯನ್ನು ಕಲಿಯಬೇಕು. ಕನ್ನಡವನ್ನು ವ್ಯವಹಾರಿಕ ಭಾಷೆಯನ್ನಾಗಿ ಬಳಸಬೇಕು. ಕನ್ನಡದ ವಾತಾವರಣ ನಿರ್ಮಾಣ ಅವಶ್ಯಕ ಹಾಗೂ ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಖಾಸಗಿ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ‘ಬೆಂಗಳೂರು ಹಬ್ಬ-2026’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೇರೆ ರಾಜ್ಯದವರು ಇಲ್ಲಿಗೆ ಬಂದು ವಾಸಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಕನ್ನಡಿಗರಾಗಿ ಬಾಳಿ, ಕನ್ನಡ ಕಲಿಯಿರಿ. ಕನ್ನಡಿಗರಾದ ನಾವು ಬೆಂಗಳೂರಿನಲ್ಲಿ ಕನ್ನಡತನವನ್ನು ಬೆಳೆಸುವ ಕೆಲಸ ಮಾಡೋಣ. ಇದಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಮುಖ್ಯಮಂತ್ರಿ ಕರೆ ನೀಡಿದರು.

ಬೆಂಗಳೂರು ಹಬ್ಬದ ಅಂಗವಾಗಿ ಇವತ್ತಿನಿಂದ 10 ದಿನಗಳ ಕಾಲ, 30ಕ್ಕೂ ಹೆಚ್ಚು ಪ್ರದೇಶಗಳಲ್ಲಿ 350ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿವೆ. ಬೆಂಗಳೂರಿನ ನಾಗರಿಕರಿಗೆ ಇದು ಸುಸಂದರ್ಭ. ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಆನಂದಿಸಿ. ನಮ್ಮ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಬೇರೆ ರಾಜ್ಯಗಳಿಂದ ಬಂದು ಇಲ್ಲಿ ವಾಸಿಸುವವರಿಗೆ ಪರಿಚಯಿಸಲು ಈ ಹಬ್ಬ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಊರುಗಳಲ್ಲಿ ಹಬ್ಬ, ಜಾತ್ರೆ, ಉತ್ಸವಗಳನ್ನು ಮಾಡುವ ಉದ್ದೇಶವೇ ಜನ ಸಂತೋಷದಿಂದ ಇರಬೇಕು. ಜಾತಿ, ಧರ್ಮಗಳನ್ನು ಮರೆತು ನಾವೆಲ್ಲರೂ ಒಂದು, ನಾವೆಲ್ಲರೂ ಮನುಷ್ಯರು ಎಂಬ ಸಂದೇಶ ಸಾರಲು. ಯಾವುದೆ ಧರ್ಮವಿರಲಿ ಅದು ಪರಸ್ಪರ ಪ್ರೀತಿ, ಗೌರವಿಸುವುದನ್ನು ಬೋಧಿಸುತ್ತದೆಯೇ ಹೊರತು, ದ್ವೇಷವನ್ನಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಕನ್ನಡ ನಾಡಿನಲ್ಲಿ ಬಸವಣ್ಣ, ಕನಕದಾಸ, ನಾರಾಯಣ ಗುರು ಸೇರಿದಂತೆ ಅನೇಕ ಸಾಧುಗಳು, ಸೂಫಿ, ಸಂತರು ಬಂದು ಹೊಗಿದ್ದಾರೆ. ಅವರೆಲ್ಲರೂ ಮನುಷ್ಯತ್ವದ ಸಂದೇಶವನ್ನೆ ಸಾರಿದ್ದಾರೆ. ಹುಟ್ಟು ಆಕಸ್ಮಿಕ, ಸಾವು ಖಚಿತ. ಈ ಹುಟ್ಟು ಹಾಗೂ ಸಾವಿನ ನಡುವಿನ ಅವಧಿಯಲ್ಲಿ ನಾವು ಏನು ಮಾಡುತ್ತೇವೆ, ಏನು ಸಾಧಿಸಿದ್ದೇವೆ, ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಅನ್ನೋದು ಮುಖ್ಯ. ನಮ್ಮ ಹೆಜ್ಜೆಗುರುತುಗಳು ಬೇರೆಯವರು ಅನುಸರಿಸುವಂತೆ ಇರಬೇಕೆ ಹೊರತು, ವಿರೋಧಿಸುವಂತೆ ಇರಬಾರದು ಎಂದು ಮುಖ್ಯಮಂತ್ರಿ ತಿಳಿಸಿದರು.

ನಂದಿನಿ ಆಳ್ವ ಹಾಗೂ ಪದ್ಮಿನಿ ರವಿ ಅವರು ಈ ಬೆಂಗಳೂರು ಹಬ್ಬ ಆಚರಿಸುವುದನ್ನು ಪ್ರಾರಂಭಿಸಿದರು. ಈಗ ಅದನ್ನು ರವಿಚಂದ್ರನ್, ಪ್ರಶಾಂತ್ ಪ್ರಕಾಶ್ ಅವರು ಮುಂದುವರೆಸಿಕೊಂಡು ಹೋಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಿದ್ದರಾಮಯ್ಯ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ನಟ ಡಾ.ಶಿವರಾಜ್ ಕುಮಾರ್, ನಟಿ ಡಾ.ಜಯಮಾಲಾ, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಗೋವಿಂದರಾಜು ಸೇರಿ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News