ಕೇಂದ್ರ ಸರಕಾರವು ಗಾಂಧೀಜಿ ಹೆಸರನ್ನೇ ಅಳಿಸುವ ಸಂಚು ನಡೆಸುತ್ತಿದೆ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್
"ಕೇಂದ್ರದ ನಿರ್ಧಾರಗಳ ಹಿಂದೆ ಆರೆಸ್ಸೆಸ್ ಕೈವಾಡ"
ರಾಯಚೂರು: ಮಹಾತ್ಮ ಗಾಂಧೀಜಿಯವರನ್ನು ಕೊಂದಿದ್ದು ಒಂದು ಸಿದ್ಧಾಂತವಾದರೆ, ಇದೀಗ ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸುವ ಮೂಲಕ ಗಾಂಧೀಜಿಯವರ ಹೆಸರನ್ನೇ ಅಳಿಸುವ ಸಂಚು ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಯೋಜನೆಯನ್ನು 'ವಿಕಸಿತ ಭಾರತ ಗ್ರಾಮೀಣ ರೋಜಗಾರ್ ಅಜೀವಿಕಾ ಮಿಷನ್ ಗ್ರಾಮೀಣ' (ವಿಬಿ ಜಿ ರಾಮ್ ಜಿ - VBG RAMji) ಎಂದು ಮರುನಾಮಕರಣ ಮಾಡುವ ಮೂಲಕ ಮೋದಿ ಸರ್ಕಾರವು ಬಡವರ ವಿರೋಧಿ ನೀತಿ ಅನುಸರಿಸುತ್ತಿದೆ. ಈ ಹೆಸರಿನ ಹಿಂದೆ ಆರೆಸ್ಸೆಸ್ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಿದರು.
ಕೇಂದ್ರದ ಪ್ರತಿಯೊಂದು ನಿರ್ಧಾರವೂ ಆರೆಸ್ಸೆಸ್ ಸಿದ್ಧಾಂತಕ್ಕೆ ಪೂರಕವಾಗಿದ್ದು, ಇವು ರೈತರು ಮತ್ತು ಬಡವರ ಹಿತಾಸಕ್ತಿಗೆ ವಿರುದ್ಧವಾಗಿವೆ. ಈ ಹಿಂದೆ ಗ್ರಾಮ ಪಂಚಾಯತಿಗಳಿಗೆ ಇದ್ದ ಕ್ರಿಯಾ ಯೋಜನೆ ರೂಪಿಸುವ ಅಧಿಕಾರ ಹಾಗೂ ಕೂಲಿ ಕಾರ್ಮಿಕರ ಹಕ್ಕನ್ನು ಈ ತಿದ್ದುಪಡಿಯ ಮೂಲಕ ಕಿತ್ತುಕೊಳ್ಳಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರವು ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಆರೆಸ್ಸೆಸ್ ಸಂಪ್ರದಾಯದಂತೆ ಕಾಯ್ದೆಗಳು ಶ್ರೀಮಂತರ ಪರವಾಗಿಯೇ ಇರುತ್ತವೆ. ಗ್ರಾಮ ಪಂಚಾಯತಿಗಳ ಹಕ್ಕನ್ನು ಕಸಿದುಕೊಂಡಿರುವುದಕ್ಕೆ ದೇಶಾದ್ಯಂತ ಪ್ರತಿರೋಧ ವ್ಯಕ್ತವಾಗುತ್ತಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಶಾಸಕರಾದ ಬಸನಗೌಡ ದದ್ದಲ್, ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯ ಎ.ವಸಂತ್ ಕುಮಾರ್, ಶರಣಗೌಡ ಬಯ್ಯಾಪುರ, ಮಾಜಿ ಶಾಸಕ ಡಿ.ಎಸ್. ಹೂಲಿಗೇರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಮಸ್ವಾಮಿ, ರಝಾಕ್ ಉಸ್ತಾದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.