ಪ್ರವಾಸಿ ತಾಣವಾಗಿ ಮಹಾತ್ಮಗಾಂಧಿ ಭೇಟಿ ನೀಡಿದ್ದ ಬದನವಾಳು ಖಾದಿ ಕೇಂದ್ರ ಅಭಿವೃದ್ಧಿ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಮಹಾತ್ಮ ಗಾಂಧಿಯವರು 1927 ಹಾಗೂ 1932ರಲ್ಲಿ ಮೈಸೂರು ಜಿಲ್ಲೆಯಲ್ಲಿರುವ ಬದನವಾಳು ಗ್ರಾಮಕ್ಕೆ ಭೇಟಿ ನೀಡಿ ಖಾದಿ ಕ್ರಾಂತಿಗೆ ಉತ್ತೇಜನ ನೀಡಿ, ‘ಗ್ರಾಮ ಸ್ವರಾಜ್ಯ’ ಪರಿಕಲ್ಪನೆಗೆ ಕಾರಣವಾದ ಹಿನ್ನೆಲೆಯಲ್ಲಿ ಬದನವಾಳು ಗ್ರಾಮದ ಎಲ್ಲ ಐತಿಹಾಸಿಕ ಹೆಜ್ಜೆ ಗುರುತುಗಳನ್ನು ಪುನಃರುಜ್ಜೀವನಗೊಳಿಸುವ ಮತ್ತು ಖಾದಿ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಆಕರ್ಷಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಈ ಕುರಿತು ರೂಪುರೇಷೆ ಸಿದ್ದಪಡಿಸಲು ನಂಜನಗೂಡು ಶಾಸಕ ದರ್ಶನ್ ಧೃವನಾರಾಯಣ್, ಪ್ರವಾಸೋದ್ಯಮ ಇಲಾಖೆ ಹಾಗೂ ಖಾದಿ ಮಂಡಳಿಯ ಅಧಿಕಾರಿಗಳೊಂದಿಗೆ ಅವರು ಚರ್ಚೆ ನಡೆಸಿದರು.
ಉದ್ದೇಶಿತ ಯೋಜನೆಯಡಿ ಏಳು ಎಕರೆ ಪ್ರದೇಶದಲ್ಲಿ ಬದನವಾಳು ಗ್ರಾಮದಲ್ಲಿ ನಡೆದು ಬಂದ ಖಾದಿ ನೇಕಾಣಿಕೆಯ ಇತಿಹಾಸ, ಖಾದಿ ಉತ್ಪಾದನ ಘಟಕ, ತರಬೇತಿ ಕೇಂದ್ರ, ವಿನ್ಯಾಸಕೇಂದ್ರ, ಖಾದಿ ಪರೀಕ್ಷೆ, ದಾಸ್ತಾನು ಕೇಂದ್ರ, ಖಾದಿ ಸಂಶೋಧನಾ ಕೇಂದ್ರ ಮುಂತಾದ ಸೌಲಭ್ಯಗಳನ್ನು ಒಳಗೊಳ್ಳುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.
ಈ ಕೇಂದ್ರದಲ್ಲಿ ಮೈಸೂರು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿವರ, ವಸ್ತು ಸಂಗ್ರಹಾಲಯ ಮುಂತಾದ ಪ್ರವಾಸಿ ಆಕರ್ಷಣೆಗಳೂ ಇರಲಿದೆ. ಮಹಾತ್ಮ ಗಾಂಧಿಯವರ ಖಾದಿ, ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಚಳವಳಿಯು ಹಲವು ಆಯಾಮದಲ್ಲಿ ಪರಿಣಾಮ ಬೀರುವ ದೃಷ್ಟಿಕೋನವನ್ನು ಹೊಂದಿದ್ದು, ಖಾದಿ ಗೃಹ ಕೈಗಾರಿಕೆಗೆ ಗಾಂಧೀಜಿ ಮಹತ್ವ ನೀಡಿದ್ದರು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಖಾದಿಯು ಸ್ವಾವಲಂಬನೆ, ಸರಳತೆ ಮತ್ತು ಸ್ವಾತಂತ್ರ್ಯದ ಸಂಕೇತವಾಗಿತ್ತು. ಖಾದಿ ಧರಿಸುವುದರಿಂದ ಪ್ರತಿ ಭಾರತೀಯ ಪ್ರಜೆಯೂ ದೇಶದ ಆರ್ಥಿಕ ಸ್ವಾತಂತ್ರ್ಯಕ್ಕೆ ತನ್ನ ಕೊಡುಗೆಯನ್ನು ನೀಡಬಹುದು ಮತ್ತು ಹಳ್ಳಿಗಳಲ್ಲಿ ಉದ್ಯೋಗ ಒದಗಿಸುವ ಮೂಲಕ ಹಳ್ಳಿಗಳ ಬಲವರ್ಧನೆಗೆ ಕಾರಣವಾಗಬಹುದು ಎಂದು ಗಾಂಧೀಜಿ ನಂಬಿದ್ದರು ಎಂಬ ಮಾಹಿತಿಯನ್ನು ಪ್ರಿಯಾಂಕ್ ಖರ್ಗೆ ಹಂಚಿಕೊಂಡರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ ಹಾಗೂ ಇನ್ನಿತರ ಖಾದಿ ಮಂಡಳಿ ಅಧಿಕಾರಿಗಳು ಭಾಗವಹಿಸಿದ್ದರು.