×
Ad

ಶಿಕ್ಷಣ ಇಲಾಖೆಯಲ್ಲಿ ಕೋಮುವಾದಿ ನೀತಿಗಳನ್ನೇ ಮುಂದುವರೆಸಲಾಗುತ್ತಿದೆ: ನಿರಂಜನಾರಾಧ್ಯ ವಿ.ಪಿ. ಬೇಸರ

Update: 2023-07-22 20:14 IST

ಬೆಂಗಳೂರು: ಹಿಂದಿನ ಕೋಮುವಾದಿ ಸರಕಾರ ರೂಪಿಸಿದ್ದ ಅವೈಜ್ಞಾನಿಕ ಕೋಮುವಾದಿ ನೀತಿಗಳನ್ನೇ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಸುತ್ತಿರುವುದು ಶೈಕ್ಷಣಿಕ ವಲಯದಲ್ಲಿ ಆತಂಕ ಹುಟ್ಟಿಸುತ್ತಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶನಿವಾರ ಪ್ರಕಟನೆ ಹೊರಡಿಸಿರುವ ಅವರು, ಶಿಕ್ಷಣ ಇಲಾಖೆಯು ಪ್ರತಿಭಾಕಾರಂಜಿ ಆಯೋಸಲು ಜ್ಞಾಪನ ಪತ್ರವನ್ನು ಹೊರಡಿಸಿದ್ದು, ಧಾರ್ಮಿಕ ಪಠಣಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆಯೋಜಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ. ಜಾತ್ಯತೀತ ಮತ್ತು ಧರ್ಮನಿರಪೇಕ್ಷ ಕೇಂದ್ರಗಳಾದ ಸರಕಾರಿ ಶಾಲೆಗಳಲ್ಲಿ ಧಾರ್ಮಿಕ ಪಠಣದ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಕನ್ನಡ ಮಾಧ್ಯಮದ ಗ್ರಾಮೀಣ ಪ್ರಾಥಮಿಕ ಹಾಗೂ ಆಡಳಿತ ಕನ್ನಡ ಜಾರಿ ಇರುವ ನಮ್ಮ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭೆಯನ್ನು ಪರೀಕ್ಷಿಸಲು ಸಂಸ್ಕೃತ ಹಾಗೂ ಅರೇಬಿಕ್ ಭಾಷೆಯಲ್ಲಿ ಧಾರ್ಮಿಕ ಪಠಣ ಸ್ಪರ್ಧೆ ಏರ್ಪಡಿಸುವ ಉದ್ದೇಶವಾದರೂ ಏನು? ಶಾಲಾ ಹಂತದಲ್ಲಿ ಮಕ್ಕಳ ಧಾರ್ಮಿಕ ಪಠಣ ಸಾಮರ್ಥ್ಯವನ್ನು ಬೆಳೆಸುವ ಪಠ್ಯವಸ್ತುವಿಗೆ ಅವಕಾಶ ಇರದಿದ್ದರೂ ಪ್ರತಿಭಾಕಾರಂಜಿಯಲ್ಲಿ ಏಕೆ ಇದನ್ನು ಅಳವಡಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಾ ಕಾರಂಜಿಯಲ್ಲಿ ಸಂಸ್ಕೃತ ಮತ್ತು ಅರೇಬಿಕ್ ಧಾರ್ಮಿಕ ಪಠಣ ಸ್ಪರ್ಧೆಯಿಂದ ಕನ್ನಡ ಮಾಧ್ಯಮದ ಕನ್ನಡದ ಮಕ್ಕಳಿಗೆ ಅದರಲ್ಲೂ ವಿಶೇಶವಾಗಿ ಸಂಸ್ಕೃತದ ಗಂಧಗಾಳಿ ಇಲ್ಲದ ಕೆಳಸ್ತರದ ವರ್ಗದ ಮಕ್ಕಳು ಪ್ರತಿಭಾಕಾರಂಜಿಯಲ್ಲಿ ಭಾಗವಹಿಸುವ ಹಕ್ಕಿನ ಅವಕಾಶ ವಂಚನೆಯಲ್ಲವೇ ಎಂದು ಅವರು ಹೇಳಿದ್ದಾರೆ.

ಮೌಲ್ಯಗಳಿರುವ ದಾಸರ ಮತ್ತು ಶರಣರ ಕೃತಿಗಳಿಂದ ಹಾಡುವುದನ್ನು ಜ್ಞಾಪನ ಪತ್ರದಲ್ಲಿ ಇಲ್ಲ. ಇದನ್ನು ಪರಿಶೀಲಿಸಿ ತಕ್ಷಣ ಅಗತ್ಯ ಕ್ರಮ ವಹಿಸಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ನಿರಂಜನಾರಾಧ್ಯ ವಿ.ಪಿ. ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News