ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ತೊರೆಯುವಂತೆ ಹೈಕಮಾಂಡ್ ಸೂಚನೆ? : Indiatoday ವರದಿ
ಸಿದ್ದರಾಮಯ್ಯ(PTI)
ಹೊಸದಿಲ್ಲಿ : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ ಎಂದು Indiatoday.in ವರದಿ ಮಾಡಿದೆ. ಆದರೆ, ಈ ಬಗ್ಗೆ ಕಾಂಗ್ರೆಸ್ ಪಕ್ಷದಿಂದಾಗಲಿ, ಸಿದ್ದರಾಮಯ್ಯ ಅವರಿಂದಾಗಲಿ ಯಾವುದೇ ಅಧಿಕೃತ ಪ್ರಕಟನೆ ಬಂದಿಲ್ಲ.
ಪಕ್ಷದ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸ್ಥಾನ ತೊರೆಯುವಂತೆ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಲಾಗಿದ್ದು, ಅವರಿಗೆ ರಾಷ್ಟ್ರೀಯ ಮಟ್ಟದ ಹೊಣೆಗಾರಿಕೆ ಹಾಗೂ ರಾಜ್ಯಸಭಾ ಸದಸ್ಯತ್ವ ನೀಡುವ ಪ್ರಸ್ತಾವನೆ ಮುಂದಿರಿಸಲಾಗಿದೆ ಎನ್ನಲಾಗಿದೆ.
ಆದರೆ, ಈ ಪ್ರಸ್ತಾವನೆಗೆ ಸಿದ್ದರಾಮಯ್ಯ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಸರಣಿ ಸಭೆಗಳು ಈ ಬೆಳವಣಿಗೆಗಳಿಗೆ ಮತ್ತಷ್ಟು ಮಹತ್ವ ತಂದಿವೆ.
ಈ ಮಧ್ಯೆ, ಕಾಂಗ್ರೆಸ್ ನ ಅಧಿಕೃತ ಪ್ರತಿನಿಧಿಗಳು ನಾಯಕತ್ವ ಬದಲಾವಣೆಯ ಸಾಧ್ಯತೆಯನ್ನು ನಿರಾಕರಿಸಿದ್ದಾರೆ. ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಸಭೆಗಳು ವಿಧಾನ ಪರಿಷತ್ತು ಮತ್ತು ರಾಜ್ಯಸಭಾ ಸ್ಥಾನಗಳಿಗೆ ಸಂಬಂಧಿಸಿದ ಚರ್ಚೆಗಳಷ್ಟೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ, ಈ ಬೆಳವಣಿಗೆಗಳು ಪರಸ್ಪರ ಸಂಬಂಧ ಹೊಂದಿವೆ ಎಂಬ ವರದಿಗಳು ಕೇಳಿಬರುತ್ತಿವೆ. ಸಿದ್ದರಾಮಯ್ಯ ಅವರು ಪಕ್ಷದ ಪ್ರಧಾನ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಮುಖ್ಯಮಂತ್ರಿ ಸ್ಥಾನಕ್ಕೆ ಸಂಭಾವ್ಯ ಉತ್ತರಾಧಿಕಾರಿಯೆಂದು ಪರಿಗಣಿಸಲಾಗುತ್ತಿರುವ ನಾಯಕರು ಪಕ್ಷದ ಉನ್ನತ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಕಳೆದ ಕೆಲವು ತಿಂಗಳುಗಳಿಂದಲೂ ಕೇಳಿಬರುತ್ತಿದ್ದರೂ, ಈ ಕುರಿತು ಪಕ್ಷದ ಹೈಕಮಾಂಡ್ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.
ಈ ವಾರ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ. ರಾಷ್ಟ್ರ ರಾಜಕಾರಣದತ್ತ ಮುಖ ಮಾಡಲಿದ್ದಾರೆ ಎಂದು NDTV ವರದಿ ಮಾಡಿದೆ.
ಸೌಜನ್ಯ: IndiaToday.in, NDTV