SIR ಪ್ರಕ್ರಿಯೆಗೆ ಸುಲಭವಾಗಿ ದಾಖಲೆ ಸಲ್ಲಿಸಲು ಮನೆ ಮನೆಗೆ ಉಚಿತ ಪ್ರಮಾಣ ಪತ್ರ ವಿತರಣೆ: ಡಿಸಿಎಂ ಡಾ.ಜಿ. ಪರಮೇಶ್ವರ್

Update: 2026-07-20 19:34 IST

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ (Photo: X/@DrParameshwara)

ಬೆಂಗಳೂರು: ಚುನಾವಣೆ ಆಯೋಗ ಕೈಗೆತ್ತಿಕೊಂಡಿರುವ ಎಸ್‍ಐಆರ್ ಪ್ರಕ್ರಿಯೆಗೆ ಅಗತ್ಯ ದಾಖಲೆಗಳನ್ನು ಜನರಿಗೆ ಸುಲಭವಾಗಿ ಒದಗಿಸುವ ಉದ್ದೇಶದಿಂದ ಮನೆ ಮನೆಗೆ ಉಚಿತ ಜಾತಿ ಪ್ರಮಾಣಪತ್ರ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರ ವಿತರಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಯೂ ಆದ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಸುಮಾರು 5 ಕೋಟಿ ಜನರಿಗೆ ಮನೆ ಮನೆಗೆ ತೆರಳಿ ಈಗಾಗಲೇ ಮಾನ್ಯವಾಗಿರುವ ಜಾತಿ ಪ್ರಮಾಣ ಪತ್ರಗಳ ವಿತರಣೆ ಹಾಗೂ ಶಾಶ್ವತ ವಾಸ ಪ್ರಮಾಣಪತ್ರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಮತ್ತು ಕರ್ನಾಟಕದ ಮೂಲ ನಿವಾಸಿ ಎಂದು ಸಾಬೀತು ಪಡಿಸಲು ಜನರಿಗೆ ಸುಲಭವಾಗಿಸುವ ನಿಟ್ಟಿನಲ್ಲಿ ಈ ಪ್ರಮಾಣ ಪತ್ರಗಳು ಸಹಾಯ ಮಾಡಲಿವೆ ಎಂದರು.

ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯಲು ಕೆಲವು ಮಾನದಂಡಗಳನ್ನು ನಿಗದಿ ಪಡಿಸಿದ್ದೇವೆ.ಅದರಂತೆ ಅರ್ಜಿದಾರರು ಕರ್ನಾಟಕದಲ್ಲಿ ಜನಿಸಿರಬೇಕು ಅಥವಾ ನಿಗದಿತ ಅರ್ಹತೆಗಳನ್ನು ಪೂರೈಸಿರಬೇಕು. ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸಿಸಿರಬೇಕು. ಕರ್ನಾಟಕದಲ್ಲೇ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಪೂರ್ಣಗೊಳಿಸಿರಬೇಕು. ರಾಜ್ಯದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರಬೇಕು. ಸರಕಾರ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಠ 7 ವರ್ಷ ಸೇವೆ ಸಲ್ಲಿಸಿರಬೇಕು. ತಂದೆ, ತಾಯಿ, ಪತಿ ಅಥವಾ ಪತ್ನಿ ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸಿಸಿರುವ ದಾಖಲೆ ಇರಬೇಕು. ಕರ್ನಾಟಕದಲ್ಲಿ ಸ್ಥಿರಾಸ್ತಿ ಹೊಂದಿರಬೇಕು ಅಥವಾ ಕಾನೂನು ಬದ್ಧವಾಗಿ ಉಪಯೋಗಿಸುತ್ತಿರಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು. ಕರ್ನಾಟಕದ ನಿವಾಸಿಯನ್ನು ವಿವಾಹವಾಗಿದ್ದರೆ ರಾಜ್ಯದಲ್ಲೇ ವಾಸಿಸುತ್ತಿರಬೇಕು ಎಂಬ ಅಂಶಗಳಿವೆ ಎಂದು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News