"ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಘೋಷಣೆಯಾದಂತಿದೆ": NEET ಹಗರಣದ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲಿನ ಲಾಠಿಪ್ರಹಾರಕ್ಕೆ ಸಿದ್ದರಾಮಯ್ಯ ಆಕ್ರೋಶ

"ನೊಂದ ಅಮಾಯಕ ವಿದ್ಯಾರ್ಥಿಗಳ ಕಣ್ಣೀರಿನ ಶಾಪದಿಂದಲೇ ಮೋದಿ ಸರಕಾರ ಪತನಗೊಳ್ಳಲಿದೆ"

Update: 2026-07-20 21:11 IST

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ‘ನೀಟ್ ಪರೀಕ್ಷೆ ಹಗರಣದ ಬಲಿಪಶು ವಿದ್ಯಾರ್ಥಿಗಳ ಶಾಂತಿಯುತ ಪ್ರತಿರೋಧದಿಂದ ನಡುಗಿಹೋಗಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಹತಾಶೆಯಿಂದ ಲಾಠಿ-ದೊಣ್ಣೆಗಳ ಮೂಲಕ ಪ್ರತಿಭಟನೆಯನ್ನು ದಮನಿಸಲು ಹೊರಟಿರುವುದನ್ನು ನೋಡಿದರೆ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಘೋಷಣೆಯಾದಂತಿದೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ನೂರಾರು ಅಮಾಯಕ ಯುವಕ-ಯುವತಿಯರು ಪೊಲೀಸರ ನಿರ್ದಯ ಲಾಠಿ ಏಟಿನಿಂದಾಗಿ ಗಾಯಗೊಂಡಿದ್ದಾರೆ. ಕೇವಲ ದಿಲ್ಲಿಯಲ್ಲಿ ಮಾತ್ರವಲ್ಲ, ಕರ್ನಾಟಕವೂ ಸೇರಿದಂತೆ ಇಡೀ ದೇಶದಲ್ಲಿ ಕೇಂದ್ರದ ಶಿಕ್ಷಣ ಮತ್ತು ಯುವಜನ ವಿರೋಧಿ ನೀತಿಯ ವಿರುದ್ಧ ಯುವಜನರು ಸಿಡಿದೆದ್ದು ಬೀದಿಗಳಿದಿದ್ದಾರೆ. ಒಬ್ಬ ಅಸಮರ್ಥ ಮತ್ತು ಭ್ರಷ್ಟ ಶಿಕ್ಷಣ ಮಂತ್ರಿಯ ವಿರುದ್ದ ಕ್ರಮಕೈಗೊಳ್ಳಲು ಸಾಧ್ಯವಾಗದ ಮೋದಿ ತಾವೊಬ್ಬ ದುರ್ಬಲ ಮತ್ತು ದುಷ್ಟರಕ್ಷಕ ಪ್ರಧಾನಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ನೊಂದ ಅಮಾಯಕ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಕಣ್ಣೀರಿನ ಶಾಪದಿಂದಲೇ ಮೋದಿ ಸರಕಾರ ಪತನಗೊಳ್ಳಲಿದೆ’ ಎಂದು ಎಚ್ಚರಿಸಿದ್ದಾರೆ.

‘ನಿರ್ಲಕ್ಷ್ಯ, ಸುಳ್ಳು ಮತ್ತು ಅಪಪ್ರಚಾರದ ಮೂಲಕ ವಿದ್ಯಾರ್ಥಿ ಮತ್ತು ಯುವಜನರ ಆಂದೋಲನವನ್ನು ದಾರಿತಪ್ಪಿಸಬಹುದೆಂಬ ಭ್ರಮೆಯಲ್ಲಿದ್ದ ಪ್ರಧಾನಿ ಮೋದಿಯವರು ಇಂದು 20 ಸಾವಿರಕ್ಕೂ ಹೆಚ್ಚು ಯುವಜನರು ಪ್ರಾಣದ ಹಂಗುತೊರೆದು ಸಂಸತ್ ಭವನದ ಮೇಲೆರಗಲು ಸಿದ್ಧರಾಗಿ ಬಂದಾಗ ದಿಕ್ಕುತೋಚದಂತಾಗಿದ್ದಾರೆ. ಕೊನೆಗೆ ಹಿಂಸೆಯ ಮೂಲಕ ಅಹಿಂಸಾ ಹೋರಾಟವನ್ನು ಹತ್ತಿಕ್ಕಲು ಹತಾಶ ಪ್ರಯತ್ನ ನಡೆಸಿ, ಅದರಲ್ಲಿಯೂ ವಿಫಲರಾಗಿದ್ದಾರೆ’ ಎಂದು ಅವರು ದೂರಿದ್ದಾರೆ.

‘ಹನ್ನೆರಡು ವರ್ಷಗಳ ಮೋದಿ ಸರಕಾರÀದಿಂದ ಹೆಚ್ಚು ಅನ್ಯಾಯಕ್ಕೊಳಗಾದವರು ಈ ದೇಶದ ವಿದ್ಯಾರ್ಥಿಗಳು ಮತ್ತು ಯುವಜನರು. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಸರಕಾರದ ಆಡಳಿತ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಇದರ ಜೊತೆಗೆ ಸಾಮಾನ್ಯವಾದ ಪರೀಕ್ಷೆಗಳನ್ನು ಕ್ರಮಬದ್ಧ ಹಾಗೂ ನ್ಯಾಯಯುತವಾಗಿ ನಡೆಸಲು ಸಾಧ್ಯವಾಗದಷ್ಟು ಆಡಳಿತ ಕುಲಗೆಟ್ಟು ಹೋಗಿದೆ’ ಎಂದು ಸಿದ್ದರಾಮಯ್ಯ ದೂರಿದ್ದಾರೆ.

‘ದೇಶಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿ ಮತ್ತು ಯುವಜನರ ಆಂದೋಲನ ಕೇವಲ ನೀಟ್ ಪರೀಕ್ಷೆಯ ಹಗರಣಕ್ಕೆ ಸೀಮಿತವಾದುದಲ್ಲ. ಕೇಂದ್ರದ ಭ್ರಷ್ಟಾಚಾರ, ದುರಾಡಳಿತ, ಸರ್ವಾಧಿಕಾರಿ ಧೋರಣೆಯಿಂದ ಜನ ಬೇಸತ್ತಿದ್ದಾರೆ. ರಚನಾತ್ಮಕವಾದ ಟೀಕೆ-ಟಿಪ್ಪಣಿಗಳನ್ನು ಸಹಿಸಲಾಗದಷ್ಟು ಅಸೈರಣೆ ಹೊಂದಿರುವ ಮೋದಿ ಸರಕಾರ ವಿರೋಧ ಪಕ್ಷಗಳ ದನಿಯನ್ನು ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗದ ಮೂಲಕ ಹತ್ತಿಕ್ಕಿದ ರೀತಿಯಲ್ಲಿಯೇ ವಿದ್ಯಾರ್ಥಿ ಆಂದೋಲನವನ್ನೂ ದಮನಿಸಲು ಹೊರಟಿರುವುದು ಮುಂದಿನ ದಿನಗಳಲ್ಲಿ ದುಬಾರಿಯಾಗಲಿದೆ’ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

‘ಒಬ್ಬ ಸತ್ಯ ಮತ್ತು ನ್ಯಾಯನಿಷ್ಠ ಗಾಂಧಿವಾದಿ ಸೋನಮ್ ವಾಂಗ್ಚುಕ್ ಅವರ ಮೇಲೆ ಮೇಲೆ ಪೊಲೀಸರನ್ನು ಛೂಬಿಟ್ಟು, ಬಲಪ್ರಯೋಗದಿಂದ ಉಪವಾಸ ನಿಲ್ಲಿಸಲು ಪ್ರಯತ್ನಿಸುವ ಮೂಲಕ ದೇಶದೊಳಗೆ ಮಾತ್ರವಲ್ಲ ವಿದೇಶದಲ್ಲಿಯೂ ಮೋದಿಯವರು ಖಂಡನೆಗೀಡಾಗಿದ್ದಾರೆ. ಮಹಾತ್ಮ ಗಾಂಧೀಜಿ ಅವರು ಹುಟ್ಟಿದ ರಾಜ್ಯಕ್ಕೆ ಸೇರಿದವರಾಗಿರುವ ಪ್ರಧಾನಿ ಮೋದಿ ಅವರು ನಾಥುರಾಮ್ ಗೋಡ್ಸೆ ಅನುಯಾಯಿಯಂತೆ ನಡೆದುಕೊಂಡಿರುವುದು ವಿಷಾದನೀಯ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.


‘ನೀಟ್ ಪರೀಕ್ಷೆ ಹಗರಣ ಮತ್ತು ದಾರಿ ತಪ್ಪಿರುವ ದೇಶದ ಒಟ್ಟು ಶಿಕ್ಷಣ ವ್ಯವಸ್ಥೆಯ ವಿರುದ್ಧ ಜನ ಜಾಗೃತಿಗೊಳಿಸಲು ಈಗಾಗಲೇ ಕಾಂಗ್ರೆಸ್ ಪಕ್ಷ ಬೀದಿಗಿಳಿದಿದೆ. ನಮ್ಮ ಪಕ್ಷದ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ನೀಟ್ ಪರೀಕ್ಷೆಯ ಹಗರಣದಿಂದ ನೊಂದವರ ಪರವಾಗಿ ದನಿ ಎತ್ತುವ ಕೆಲಸ ಮಾಡಬೇಕು. ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಈಗಾಗಲೇ ಈ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ನೀಟ್ ಪರೀಕ್ಷೆ ಹಗರಣ ಸೇರಿದಂತೆ ಶಿಕ್ಷಣ ಕ್ಷೇತ್ರವನ್ನು ಅಧೋಗತಿಗೆ ತಂದು ನಿಲ್ಲಿಸಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ  ಪ್ರಧಾನ್‍ರನ್ನು ಪ್ರಧಾನಿ ಮೋದಿಯವರು ತಕ್ಷಣವೇ ಸಂಪುಟದಿಂದ ಕಿತ್ತು ಹಾಕಬೇಕು. ವಿದ್ಯಾರ್ಥಿ ನಾಯಕರನ್ನು ಸಮಾಲೋಚನೆಗೆ ಕರೆದು ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರವನ್ನು ಕಲ್ಪಿಸಲು ಮುಂದಾಗಬೇಕು. ಇದೇ ರೀತಿ ಬಲಪ್ರಯೋಗದ ಮೂಲಕವೇ ಶಾಂತಿಯುತವಾದ ಪ್ರತಿರೋಧವನ್ನು ಎದುರಿಸಲು ಹೊರಟರೆ ಕೇಂದ್ರ ಸರಕಾರದ ಪತನದ ದಿನ ಎಣಿಕೆ ಶುರುವಾಗಲಿದೆ’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News