ಮಾನಹಾನಿಕರ ಹೇಳಿಕೆ ನೀಡದಂತೆ ಧನ್ವೀರ್ ನಿರ್ಬಂಧಿಸಲು ಕೋರಿ ಕೋರ್ಟ್ ಮೆಟ್ಟಿಲೇರಿದ ದರ್ಶನ್ ದಂಪತಿ
ಧನ್ವೀರ್(PC : instagram)/ ದರ್ಶನ್ ಹಾಗೂ ವಿಜಯಲಕ್ಷ್ಮೀ
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣವೂ ಸೇರಿದಂತೆ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ವೈಯಕ್ತಿಕ, ಖಾಸಗಿ, ಹಣಕಾಸು ಮತ್ತು ನಿಭಾಯಿಸುತ್ತಿರುವ ಕಾನೂನು ಸಮಸ್ಯೆಗಳ ಬಗ್ಗೆ ಯಾವುದೇ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ನಟ ಧನ್ವೀರ್ ವಿರುದ್ಧ ಪ್ರತಿಬಂಧಕಾದೇಶ ಹೊರಡಿಸುವಂತೆ ಕೋರಿ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ದರ್ಶನ್ ದಂಪತಿ ಸಲ್ಲಿಸಿರುವ ಮೂಲ ದಾವೆಯಲ್ಲಿ ಧ್ವನೀರ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದ್ದು, ದಾವೆ ಇನ್ನಷ್ಟೇ ನ್ಯಾಯಾಲಯದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
ಮನವಿ ಏನು?
ಧನ್ವೀರ್ ಮತ್ತವರ ಏಜೆಂಟ್, ಪ್ರತಿನಿಧಿಗಳು, ಕೆಲಸಗಾರರು, ಬೆಂಬಲಿಗರು ಅಥವಾ ಅವರ ಮೂಲಕ ಇಲ್ಲವೇ ಅವರ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಥವಾ ಹಕ್ಕು ಸಾಧಿಸುವ ಯಾವುದೇ ವ್ಯಕ್ತಿಯಾಗಲಿ ಪತ್ರಿಕೆ, ಟಿವಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಗೂ ತಮ್ಮ ವೈಯಕ್ತಿಕ, ಖಾಸಗಿ, ವೈವಾಹಿಕ, ಕುಟುಂಬ ಸದಸ್ಯರು, ಹಣಕಾಸು ಮತ್ತು ಕಾನೂನು ಅಥವಾ ರೇಣುಕಾಸ್ವಾಮಿ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡಬಾರದು. ಆ ಹೇಳಿಕೆಗಳನ್ನು ಪ್ರಸಾರ ಮಾಡಬಾರದು ಹಾಗೂ ಸಂದರ್ಶನ ನೀಡಬಾರದು ಎಂದು ಪ್ರತಿಬಂಧಕಾದೇಶ ಹೊರಡಿಸಬೇಕು ಎಂದು ದರ್ಶನ್ ದಂಪತಿ ದಾವೆಯಲ್ಲಿ ಮನವಿ ಮಾಡಿದ್ದಾರೆ.