‘ಮುಂಗಾರು ಬೆಳೆ ಹಾನಿ’; ರಾಜ್ಯ ಸರಕಾರದಿಂದ ರೈತರಿಗೆ ಪರಿಹಾರ ಬಿಡುಗಡೆ : ಆದೇಶ
ಬೆಂಗಳೂರು : ರಾಜ್ಯ ಸರಕಾರವು ಎಸ್ಡಿಆರ್ ಎಫ್/ಎನ್ಡಿಆರ್ ಎಫ್ ಮಾರ್ಗಸೂಚಿಗಳ ಪ್ರಕಾರ ಷರತ್ತಿಗೊಳಪಟ್ಟು ಪ್ರತಿ ರೈತರಿಗೆ ಗರಿಷ್ಠ 2500 ರೂ.ಗಳವರೆಗೆ ಬೆಳೆ ಹಾನಿ ಪರಿಹಾರವನ್ನು 2026-27ನೆ ಸಾಲಿನ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿ(ಎಸ್ಡಿಆರ್ ಎಫ್)ಯಲ್ಲಿ ಬಿಡುಗಡೆ ಮಾಡಲು ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ.
ಕೇಂದ್ರ ಸರಕಾರದಿಂದ ಎನ್ಡಿಆರ್ ಎಫ್(ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ಪರಿಹಾರ ನಿಧಿ)ರಡಿ ಈವರೆಗೂ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಬೆಳಹಾನಿ ಪರಿಹಾರವನ್ನು ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದಿಂದ ಎನ್ಡಿಆರ್ಎಫ್ ಅನುದಾನ ಬಿಡುಗಡೆ ಆದ ನಂತರ ಎಸ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆಯಿರುವ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಷರತ್ತುಗಳು: ರೈತರಿಂದ ಯಾವುದೆ ರೀತಿಯ ಅರ್ಜಿಗಳನ್ನು ಪಡೆಯದೆ ಸಕ್ಷಮ ದತ್ತಾಂಶಗಳ ಅನುಸಾರ ಅರ್ಹತೆಗೆ ಅನುಗುಣವಾಗಿ ಬೆಳೆ ಪರಿಹಾರವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿ ಫಾರ್ಮರ್ ಐಡಿ ಹೊಂದಿರುವ ಹಾಗೂ ಬರ ಘೋಷಣೆಯಾಗಿರುವ ತಾಲೂಕುಗಳಲ್ಲಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿರುವ ಜ್ಞಾಪನಾ ಪತ್ರದಲ್ಲಿ ನಮೂದಾಗಿರುವ ತಾಲೂಕುವಾರು ಬೆಳೆಹಾನಿಗೆ ಸೀಮಿತಗೊಳಿಸಿ ಬೆಳೆ ಪರಿಹಾರ ಪಾವತಿಸಲಾಗುವುದು.
ಫಲಾನುಭವಿಯು ಜಮೀನಿಗೆ ಸಂಬಂಧಿಸಿದಂತೆ ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಫಲಾನುಭವಿಯ ಆಧಾರ್ ಸಂಖ್ಯೆಯು ಬ್ಯಾಂಕ್ ಖಾತೆಗೆ ಜೋಡಣೆ ಯಾಗಿರಬೇಕು. ಡಿಬಿಟಿ ಮೂಲಕ ಬೆಳೆ ಪರಿಹಾರ ಪಾವತಿ ಮಾಡಲಾಗುವುದು. ಜಂಟಿ ಖಾತೆದಾರರಾಗಿದ್ದಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿದ ವಿಸ್ತೀರ್ಣಕ್ಕೆ ಅನುಗುಣವಾಗಿ ಬೆಳೆಹಾನಿ ಪರಿಹಾರ ಪಾವತಿಸಲಾಗುವುದು ಎಂದು ತಿಳಿಸಲಾಗಿದೆ.