ಬೆಂಗಳೂರು : ಹಾಲಿನ ದರ ಏರಿಕೆ ಮಾಡುವ ಮೂಲಕ ನಮ್ಮ ಸರಕಾರ ರೈತರ ಕೈ ಬಲಪಡಿಸುವ ಕೆಲಸ ಮಾಡುತ್ತಿದೆ.  8ರೂ., ಏರಿಕೆ ಮಾಡಿ, ರೈತರಿಗೆ 6ರೂ., ಲಾಭ ನೀಡುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಸರಕಾರ ಪ್ರಕಟಿಸಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮಪ್ಪನೂ ರೈತರೇ. ಅವರಿಗೆ 6 ರೂ., ದೊರೆಯುವುದಾದರೆ, ನಾವು (ನಗರವಾಸಿಗಳು) ಇಲ್ಲಿ ಇನ್ನೆರೆಡು ರೂ.ಹೆಚ್ಚುವರಿ ನೀಡಿ ಹಾಲು ಖರೀದಿಸಿದರೆ ತಪ್ಪೇನು? ನಮ್ಮಪ್ಪನಿಗೆ ಹಣ ನೀಡಲು ನಾವು ಯೋಚನೆ ಮಾಡಬೇಕೆ? ಎಂದು ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡರು.

ವಿಡಿಯೋ ಮಾಡಿದವರಷ್ಟೇ ಅಲ್ಲ, ಹರಿಬಿಟ್ಟವರೂ ತಪ್ಪಿತಸ್ಥರೆ: ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಹೆಸರಿನಲ್ಲಿ ನಕಲಿ ವಿಡಿಯೋ ಸೃಷ್ಟಿಸಿ, ಸೋರಿಕೆ (ಲೀಕ್) ಮಾಡಿರುವವರ ವಿರುದ್ಧ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಏನೇ ಇದ್ದರೂ ಗೃಹ ಸಚಿವರು ಉತ್ತರಿಸುತ್ತಾರೆ. ನಕಲಿ ವಿಡಿಯೋ ಮಾಡಿದವರಷ್ಟೇ ಅಲ್ಲದೆ, ಅದನ್ನು ಹರಿಬಿಟ್ಟವರೂ ಸಹ ತಪ್ಪಿತಸ್ಥರೇ. ವಿಡಿಯೋ ಹರಿಬಿಟ್ಟವರ ಬಗ್ಗೆ ನಮಗೆ ಈಗಷ್ಟೇ ಮಾಹಿತಿ ಲಭ್ಯವಾಗಿದೆ. ಜಾಲತಾಣಗಳಲ್ಲಿ ಲೀಕ್ ಮಾಡಿದವರ ಮೇಲೂ ಕಾನೂನು ಕ್ರಮ ಜರುಗಲಿದೆ ಎಂದು ಅವರು ತಿಳಿಸಿದರು.

ಯಾರು ಎಷ್ಟೇ ನಕಲಿ ವಿಡಿಯೋಗಳನ್ನು ಸೃಷ್ಟಿಸಿದರೂ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರಲು ಸಾಧ್ಯವಿಲ್ಲ. ಅದನ್ನು ಜನರೂ ಒಪ್ಪುವುದಿಲ್ಲ. ಸಿದ್ದರಾಮಯ್ಯ ವಿರುದ್ಧ ಯಾವುದೇ ದಾಖಲೆಗಳಿಲ್ಲದೆ, ಆಸೆ-ಆಮಿಷಗಳನ್ನು ಒಡ್ಡಿ ಕೆಲವರಿಂದ ಈ ವಿಡಿಯೋ ಸಿದ್ಧಪಡಿಸಲಾಗಿದೆ ಎಂದು ಅವರು ದೂರಿದರು.

ದೀರ್ಘಕಾಲದಿಂದ ರಾಜಕಾರಣ ಮಾಡಿಕೊಂಡು ಬಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಇಂತಹ ಕೃತ್ಯವೆಸಗುವ ಮುನ್ನ ಅದರ ಪರಿಣಾಮಗಳ ಬಗ್ಗೆ ಅರಿವಿರಬೇಕಿತ್ತು ಎಂದು ಹೇಳಿದ ಚಲುವರಾಯಸ್ವಾಮಿ, ದಿಲ್ಲಿಯಲ್ಲಿ ಈ ವಿಡಿಯೋ ಬಿಡುಗಡೆ ಮಾಡಲು ಯಾರೆಲ್ಲ ಇದ್ದರು, ಮೊಬೈಲ್ ಅನ್ನು ಎಲ್ಲಿಂದ ಪಡೆಯಲಾಯಿತು ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರು ಹರಿಬಿಟ್ಟರು ಎಂಬುದೆಲ್ಲವೂ ತನಿಖೆಯಿಂದ ಹೊರಬರಲಿದೆ ಎಂದು ನುಡಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸಾಮಾಜಿಕ ಜಾಲತಾಣ ಘಟಕದೊಂದಿಗೆ ಗುರುತಿಸಿಕೊಂಡಿರುವ ಕೆಲವರು ಬಂಧನಕ್ಕೊಳಗಾಗಿದ್ದಾರೆ. ಇನ್ನೂ ಕೆಲವರು ಪರಾರಿಯಾಗಿರುವ ವಿಚಾರವೂ ಇದೆ. ತನಿಖೆಯಿಂದ ಸಂಪೂರ್ಣ ಸತ್ಯಾಂಶ ಹೊರಬರಬೇಕಿರುವುದರಿಂದ, ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯುವುದು ಸೂಕ್ತ ಎಂದು ಚಲುವರಾಯಸ್ವಾಮಿ ಹೇಳಿದರು.

ಕೇಂದ್ರದ ನಿರ್ಧಾರಕ್ಕೆ ನಾವು ಸಹಕಾರ ನೀಡಬಹುದು: ಕಬ್ಬಿನ ದರ ಏರಿಕೆ ಬಗ್ಗೆ ಕೇಂದ್ರ ಸರಕಾರವೇ ಅಂತಿಮ ನಿರ್ಧಾರ ಪ್ರಕಟಿಸಬೇಕು. ಎಂಎಸ್‍ಪಿ (ಕನಿಷ್ಠ ಬೆಂಬಲ ಬೆಲೆ) ನಿಗದಿಪಡಿಸುವ ಅಧಿಕಾರ ಕೇಂದ್ರಕ್ಕಿದೆ. ನಾವೇನಿದ್ದರೂ (ರಾಜ್ಯ ಸರಕಾರ) ಕೇಂದ್ರದ ನಿರ್ಧಾರಗಳಿಗೆ ಸಹಕಾರ ನೀಡುತ್ತೇವೆ. ರೈತರ ಬೇಡಿಕೆಗೆ ಸ್ಪಂದಿಸಿ ನಮ್ಮ ಮುಖ್ಯಮಂತ್ರಿ ಈಗಾಗಲೇ ಮಧ್ಯಪ್ರವೇಶಿಸಿದ್ದಾರೆ. ಕೇಂದ್ರದ ಮೇಲೂ ಒತ್ತಡ ಹೇರುವ ಕೆಲಸ ಮಾಡಿದ್ದೇವೆ. ಇನ್ನಾದರೂ ಕೇಂದ್ರ ಸರಕಾರ ನಮ್ಮ ರೈತರ ಪರ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor