ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪ ಪ್ರಕರಣ | ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ : ‘ಸಮಾನ ಮನಸ್ಕರ’ ಆಗ್ರಹ
ಬೆಂಗಳೂರು : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪದ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ‘ಸಮಾನ ಮನಸ್ಕರು’ ಆಗ್ರಹಿಸಿದ್ದಾರೆ.
ಸೋಮವಾರ ನಗರದ ಯುವಿಸಿಎಯಲ್ಲಿರುವ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ವಿವಿಧ ಪಕ್ಷ ಮತ್ತು ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಸಮಾನ ಮನಸ್ಕರ ಸಭೆ ನಡೆಯಿತು. ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದಿಂದ ಧರ್ಮಸ್ಥಳ ಸರಣಿ ಹತ್ಯೆ ಆರೋಪದ ಕುರಿತು ನ್ಯಾಯಸಿಗುವ ಯಾವುದೇ ನಂಬಿಕೆಯಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕಾನಾಥ್, ಧರ್ಮಸ್ಥಳದ ಪ್ರಕರಣಗಳ ಕುರಿತು ತನಿಖೆ ನಡೆಸಲು ಎಸ್‌ಐಟಿ ರಚನೆ ಮಾಡುವಂತೆ ಸರಕಾರಕ್ಕೆ ಆಗ್ರಹಿಸಿ ಪತ್ರ ಬರೆದಿದ್ದೆವು. ಆದರೆ ನಾವು ಸೂಚಿಸಿದ ರೀತಿ ಎಸ್‌ಐಟಿ ರಚನೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗೌರಿ ಲಂಕೇಶ್ ಹತ್ಯೆ ಪ್ರಕರಣ ನಡೆದು ಸುಮಾರು 7 ವರ್ಷಗಳಾಗಿವೆ. ಆರೋಪಿಗಳು ಹೊರಗಡೆಯೇ ಇದ್ದಾರೆ. ಇನ್ನೂ ಟ್ರಯಲ್ ಮುಗಿದಿಲ್ಲ. ಧರ್ಮಸ್ಥಳ ಪ್ರಕರಣದ ಟ್ರಯಲ್‌ನ್ನು ರೆಗ್ಯುಲರ್ ಕೋರ್ಟ್ಗಳಲ್ಲಿ ನಡೆಸಿದರೆ ನೂರು ವರ್ಷಗಳಾದರೂ ಮುಗಿಯುವುದಿಲ್ಲ. ಆದ್ದರಿಂದ ತ್ವರಿತ ನ್ಯಾಯಾಲಯವನ್ನು ರಚನೆ ಮಾಡಬೇಕು ಎಂದು ಹೇಳಿದರು.
ಉಗ್ರಪ್ಪ ಕಮಿಷನ್ ವರದಿಯ ಪ್ರಕಾರ 467 ಮಂದಿ ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ. ವರದಿಯನ್ನು 2018ರಲ್ಲೇ ಸರಕಾರಕ್ಕೆ ಸಲ್ಲಿಸಲಾಗಿದೆ. ಅದರಲ್ಲಿ ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯದವರೂ ಇರಬಹುದು. ಆದರೆ ಕರ್ನಾಟಕದವರು ಹೆಚ್ಚು ಜನರು ಇದ್ದಾರೆ ಎಂದರು.
ಸಭೆಯಲ್ಲಿ ಅಂಕಣಕಾರ ಶಿವಸುಂದರ್, ಪ್ರಾಧ್ಯಾಪಕ ಎ.ನಾರಾಯಣ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ, ಹೋರಾಟಗಾರ ಎಚ್.ಎಂ.ವೆಂಕಟೇಶ್, ಸಾಮಾಜಿಕ ಹೋರಾಟಗಾರರಾದ ಚೇತನ್ ಅಹಿಂಸಾ, ಬಿ.ಆರ್.ಭಾಸ್ಕರ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಸೌಜನ್ಯ ಮತ್ತು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯ್ಯೂಟ್ಯೂಬ್ ಚಾನೆಲ್‌ಗಳಿಗೆ ನೀಡಿರುವ ಕಾನೂನು ನೋಟಿಸ್‌ಗಳನ್ನು ವಜಾಗೊಳಿಸುವಂತೆ ಕೆಲಸ ಮಾಡಲು ವಕೀಲರ ತಂಡ ಕಟ್ಟಿ ಕೆಲಸ ಮಾಡಲಾಗುವುದು. ಧರ್ಮಸ್ಥಳ ಪ್ರಕರಣದಲ್ಲಿ ಜಯ ಸಾಧಿಸಲು ಬೀದಿಯ ಹೋರಾಟ ಪ್ರಬಲವಾಗಬೇಕು. ಅಪರಾಧಗಳ ಮೇಲೆ ಅಪರಾಧವಾಗುತ್ತಿವೆ. ಸಮಾಜ ಅಧೋಗತಿಗೆ ಇಳಿದಿದೆ. ಅದಕ್ಕಾಗಿ ವಕೀಲರು ಅಗತ್ಯವಾದ ಕೆಲಸ ಮಾಡಬೇಕಿದೆ.
-ವಿ.ಗೋಪಾಲಗೌಡ, ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ
ಧರ್ಮಸ್ಥಳದ್ದು ಹೈವೋಲ್ಟೇಜ್ ಪ್ರಕರಣವಾಗಿರುವುದರಿಂದ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಯ ನೇತೃತ್ವದಲ್ಲಿ, ದಕ್ಷ-ಪ್ರಾಮಾಣಿಕ ಐಪಿಎಸ್ ಅಧಿಕಾರಿಗಳ ವಿಶೇಷ ತನಿಖಾ ತಂಡ ರಚನೆ ಮಾಡಬೇಕಿತ್ತು. ಎಸ್‌ಐಟಿ ರಚನೆ ಮಾಡಿದ ನಂತರ ಇಡೀ ಪ್ರಕರಣದ ತನಿಖೆಯನ್ನು ವೀಡಿಯೊ ದಾಖಲೀಕರಣ ಮಾಡಬೇಕು. ತನಿಖೆಯಿಂದ ಹೊರಬಂದ ಮೂಳೆ ಮತ್ತು ದೇಹದ ಇತರ ಭಾಗಗಳ ಬಗ್ಗೆ ಅಧ್ಯಯನ ಮಾಡಲು, ಎಫ್‌ಎಸ್‌ಎಲ್ ಅಧಿಕಾರಿ ಇರಬೇಕು. ಜತೆಗೆ ಎಸ್‌ಐಟಿಗೆ ನಿರ್ದೇಶನ ನೀಡಲು ಕ್ರಿಮಿನಲ್ ಪ್ರಕರಣಗಳಲ್ಲಿ ವಿಶೇಷ ಪ್ರಾವೀಣ್ಯತೆ ಪಡೆದಿರುವ ಪ್ರಾಸಿಕ್ಯೂಟರ್ ನೇಮಕ ಮಾಡಬೇಕು.
-ಡಾ.ಸಿ.ಎಸ್.ದ್ವಾರಕಾನಾಥ್, ಹಿರಿಯ ವಕೀಲ