ʼಧರ್ಮಸ್ಥಳ ದೂರುʼದಾರನಿಗೆ ಪವರ್ ಟಿವಿಯಿಂದ ನಿಂದನೆ; ದೂರು ದಾಖಲು
ಬೆಂಗಳೂರು : ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಹೂತು ಹಾಕಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿರುವ ಸಾಕ್ಷಿಗೆ ಪವರ್ ಟಿವಿ ಮತ್ತು ಅದರ ಮುಖ್ಯಸ್ಥ ರಾಕೇಶ್ ಶೆಟ್ಟಿ, ಬಹಿರಂಗವಾಗಿ "ನೀಚರಲ್ಲೇ ನೀಚ" ಎಂದು ನಿಂದಿಸುತ್ತಿರುವುದಾಗಿ ಪರಮೇಶ್ ವಿ. ಬೆಳತ್ತೂರು ಎಂಬವರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಕ್ಷಿಗೆ ಸಾರ್ವಜನಿಕವಾಗಿ ಅವಮಾನ ಮಾಡಬೇಕು ಎಂಬ ಉದ್ದೇಶದಿಂದ "ನೀಚರಲ್ಲೇ ನೀಚ" ಎಂದು ಜಾತಿಯನ್ನು ಉದ್ದೇಶಿಸಿ ಮಾಡಿರುವ ಅವಮಾನವೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989 ರ ಅಡಿಯಲ್ಲಿ ಅಪರಾಧವಾಗಿರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜು.3ರಂದು ಧರ್ಮಸ್ಥಳದ ದೂರುದಾರ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಆ ಬಳಿಕ, ದೂರುದಾರ ತಾನು ಕೆಳಜಾತಿಗೆ ಸೇರಿದ್ದು, ಧರ್ಮಸ್ಥಳದ ಕೆಲವರು ತಮ್ಮ ಪ್ರಭಾವ ಬಳಸಿ, ನೂರಾರು ಪುರುಷರು, ಯುವತಿಯರು ಮತ್ತು ಮಹಿಳೆಯರ ಮೃತದೇಹಗಳನ್ನು ಹೂತು ಹಾಕಿಸಿದ್ದಾರೆ ಎಂದು ಅವರು ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಿರಂತರ ದೌರ್ಜನ್ಯಕ್ಕೊಳಗಾಗಿ ಜೀವ ಭಯದಲ್ಲಿಯೇ ಬದುಕಿರುವುದಾಗಿ ದೂರುದಾರನು ತಿಳಿಸಿದ್ದು, ಆತ್ಮಸಾಕ್ಷಿಯ ಪ್ರೇರಣೆಯಿಂದಾಗಿ ಹಿಂದೆ ಪ್ರಕರಣಗಳ ಮೃತದೇಹಗಳನ್ನು ತಾನು ಹೂತು ಹಾಕಿರುವ ಸ್ಥಳಗಳನ್ನು ತೋರಿಸಲು ಮುಂದಾಗಿದ್ದಾರೆ. ದಾಖಲೆಗಳ ಅನುಸಾರ ಆ ವ್ಯಕ್ತಿಯು ದಲಿತನಾಗಿದ್ದು, ಪ್ರಕರಣವು ದೇಶದಾದ್ಯಂತ ಗಮನ ಸೆಳೆದಿದೆ ಎಂದು ಪರಮೇಶ್ ಅವರು ಸಲ್ಲಿರುವ ದೂರಿನಲ್ಲಿದೆ.
ಪವರ್ ಟಿವಿ ಎಂಬ ಸುದ್ದಿ ವಾಹಿನಿಯು ಯುಟ್ಯೂಬ್ ಮತ್ತು ಸಾಮಾಜಿಕ ಜಾಲತಾಣದಲ್ಲಿರುವ ಮಾಧ್ಯಮಗಳಲ್ಲಿ, ಕಳೆದ ಮೂರು ದಿನಗಳಿಂದ ಸತತವಾಗಿ ಆ ವ್ಯಕ್ತಿಯನ್ನು "ಹುಚ್ಚ", "ನೀಚ" "ನೀಚರಲ್ಲೇ ನೀಚ" ಎಂದು ಸಾರ್ವಜನಿಕವಾಗಿ ನಿಂದಿಸುತ್ತಿದ್ದಾರೆ. ಈ ರೀತಿಯ ಹೇಳಿಕೆಗಳು "The Scheduled Castes And Scheduled Tribes (Prevention of Atrocities) Act, 1989" ತೀವ್ರ ಸ್ವರೂಪದ ಉಲ್ಲಂಘನೆಯಾಗಿರುತ್ತದೆ ಎಂದು ಸಾಮಾಜಿಕ ಚಿಂತಕರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ದೂರುದಾರ ವ್ಯಕ್ತಿಯು ರಕ್ಷಿತ ಸ್ಥಳದಲ್ಲಿ ರಕ್ಷಣಾ ಬೆಂಗಾವಿನಲ್ಲಿರುವ ಕಾರಣ ಆತನೇ ಖುದ್ದಾಗಿ ಪೊಲೀಸ್ ಠಾಣೆಗೆ ಹಾಜರಾಗಿ ದೂರನ್ನು ನೀಡಬಹುದಾದ ಸಾಧ್ಯತೆ ಇಲ್ಲ. ದೂರುದಾರನಿಗೆ ರಾಕೇಶ್ ಶೆಟ್ಟಿ ಪದೇ ಪದೇ ನಿಂದಿಸುತ್ತಿರುವುದು ಕಾನೂನು ಬಾಹಿರ ಮಾತ್ರವಲ್ಲ, ದಲಿತರ ರಕ್ಷಣೆಗೆಂದು ಹೊರ ತಂದಿರುವ ಕಾಯ್ದೆಯ ತ್ರೀವ್ರ ಸ್ವರೂಪದ ಉಲ್ಲಂಘನೆ ಮತ್ತು ಅಮಾನವೀಯ. ರಾಕೇಶ್ ಶೆಟ್ಟಿಯ ಹೇಳಿಕೆಗಳು, ಆ ರಕ್ಷಿತ ವ್ಯಕ್ತಿಯನ್ನು ಸಾರ್ವಜನಿಕವಾಗಿ ನಿಂದಿಸಿ, ಮಾಹಿತಿಯನ್ನು ಪೊಲೀಸರಿಗೆ ಬಹಿರಂಗಪಡಿಸದಂತೆ ಮಾಡುವ ಉದ್ದೇಶವಿದ್ದಂತೆ ಕಂಡು ಬರುತ್ತದೆ. ಅದ್ದರಿಂದ, ಈ ಕೂಡಲೇ ಕಾನೂನಿನ್ವಯ ರಾಕೇಶ್ ಶೆಟ್ಟಿ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ದೂರು ಸ್ವೀಕರಿಸಿರುವ ಕಾಡುಗೋಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಈ ಕುರಿತು ಹೆಚ್ಚುವರಿ ತನಿಖೆ ಅಗತ್ಯವಿದೆ ಎಂದು ಎಫ್‌ಐಆರ್ ದಾಖಲಿಸಲು ನ್ಯಾಯಾಲಯದಿಂದ ಅನುಮತಿ ಕೋರಿದ್ದಾರೆ. ದೂರುದಾರ ಪರಮೇಶ್ ಅವರು ಜುಲೈ 28 ರಂದು ನ್ಯಾಯಾಲಯದಲ್ಲಿ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.