ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಪಟ್ಟಿ ಪ್ರದರ್ಶನ ಕಡ್ಡಾಯ : ಸಚಿವ ಯು.ಟಿ.ಖಾದರ್
ಬೆಂಗಳೂರು : ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯಿದೆಯನ್ವಯ ತನ್ನ ಆವರಣದಲ್ಲಿ ಚಿಕಿತ್ಸಾ ದರ ಪಟ್ಟಿಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸುವುದು ಕಡ್ಡಾಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ಜತೆ ಇತ್ತೀಚೆಗೆ ಸಭೆ ನಡೆಸಿದ್ದು, ಕ್ಯಾನ್ಸರ್ ಚಿಕಿತ್ಸೆಯ ಔಷಧಗಳ ದರ ಅತಿಯಾಗಿ ಏರಿಕೆಯಾಗಿದ್ದು, ರೋಗಿಗಳಿಂದ ಭಾರಿ ಮೊತ್ತದ ಹಣ ವಸೂಲಿ ಮಾಡಲಾಗುತ್ತಿರುವುದು ಔಷಧ ಆಡಳಿತ ಇಲಾಖೆ ನಡೆಸಿದ ತನಿಖೆಯಲ್ಲಿ ಕಂಡು ಬಂದಿದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಔಷಧ ದರಗಳಲ್ಲಿ ಪಾರದರ್ಶಕತೆ ತರಲು ನಮ್ಮ ಸರಕಾರ ಬದ್ಧವಾಗಿದೆ. ಅದೇ ರೀತಿ ಆಸ್ಪತ್ರೆಗಳು ನೀಡುವ ಚಿಕಿತ್ಸೆ ಹಾಗೂ ಖರೀದಿಸುವ ಔಷಧಗಳ ದರದಲ್ಲಿ ಪಾರದರ್ಶಕತೆ ಇರಬೇಕು. ಕಡಿಮೆ ದರದ ಲಾಭ ನೇರವಾಗಿ ರೋಗಿಗಳಿಗೆ ತಲುಪಬೇಕು ಎಂದು ಖಾದರ್ ಹೇಳಿದರು.
ಖಾಸಗಿ ಆಸ್ಪತ್ರೆಗಳು ಆರೋಗ್ಯ ವ್ಯವಸ್ಥೆಯ ಪ್ರಮುಖ ಭಾಗ. ಆರೋಗ್ಯ ಸೇವೆ ಕೇವಲ ವ್ಯವಹಾರವಲ್ಲ, ಅದು ಸಮಾಜ ಸೇವೆ. ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳು ಒಟ್ಟಾಗಿ, ಆರೋಗ್ಯಕರ ಮತ್ತು ಸಮಾನತೆಯ ಸಮಾಜ ಕಟ್ಟುವ ಅಗತ್ಯವಿದೆ. ಪ್ರತಿಯೊಬ್ಬ ರೋಗಿಗೂ ಗುಣಮಟ್ಟದ ಚಿಕಿತ್ಸೆ ನ್ಯಾಯಯುತ ದರದಲ್ಲಿ ಸಿಗುವಂತೆ ಮಾಡುವುದೇ ನಮ್ಮೆಲ್ಲರ ಗುರಿ. ಈ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ದರ ಪಟ್ಟಿ ಕಡ್ಡಾಯವಾಗಿ ಪ್ರದರ್ಶಿಸಬೇಕಿದ್ದು, ಈ ನಿಯಮ. ಇದನ್ನು ಎಲ್ಲ ಆಸ್ಪತ್ರೆಗಳು ಪಾಲಿಸಬೇಕು ಎಂದು ಅವರು ಸೂಚನೆ ನೀಡಿದರು.
ಹೆಚ್ಚುವರಿ ದರದ ಕುರಿತು ರಾಜ್ಯ ಸರಕಾರವು ಕೇಂದ್ರಕ್ಕೆ ಪತ್ರ ಬರೆದಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಔಷಧಗಳಿಗೆ ಅಧಿಕ ದರ ವಿಧಿಸಿ ರೋಗಿಗಳನ್ನು ಶೋಷಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರವು ಈಗ ಬೆಲೆ ನಿಯಂತ್ರಣದ ಹೊರಗಿರುವ ಕ್ಯಾನ್ಸರ್ ಔಷಧಗಳ ವ್ಯಾಪಾರ ಲಾಭಾಂಶವನ್ನು ಗರಿಷ್ಠ ಚಿಲ್ಲರೆ ಬೆಲೆಯ(ಎಂಆರ್ಪಿ) ಶೇ.30ಕ್ಕೆ ಮಿತಿಗೊಳಿಸಿ, ಅನುಮೋದನೆ ನೀಡಿದೆ. ಇದರಿಂದ ಕ್ಯಾನ್ಸರ್ ರೋಗಿಗಳ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.
ಅದೇ ರೀತಿ, ಹೃದಯ ಮತ್ತು ಮೂತ್ರಪಿಂಡ ಸಂಬಂಧಿತ ಚಿಕಿತ್ಸೆಗಳ ಔಷಧಗಳು ರೋಗಿಗಳಿಗೆ ನ್ಯಾಯಯುತ ದರದಲ್ಲಿತಲುಪುತ್ತಿವೆಯೇ ಎಂಬ ಬಗ್ಗೆ ಸರಕಾರ ಪರಿಶೀಲನೆ ನಡೆಸುತ್ತಿದೆ ಎಂದು ಅವರು ವಿವರ ನೀಡಿದರು.