ಬೆಂಗಳೂರು : ಕರ್ನಾಟಕದ ಪ್ರಮುಖ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ ಅ.24ರಿಂದ 2026-27ರ ಪ್ರವಾಸಿ ಋತುವಿನ ಯಾತ್ರೆಗಳನ್ನು ಹೊಸ ಮೆರುಗಿನಲ್ಲಿ ಆರಂಭಿಸಲಿದ್ದು, ವನ್ಯಜೀವಿ, ರಾಜವೈಭವ, ವಿಶ್ವ ಪರಂಪರೆ, ಕಾಫಿ ನಾಡು ಮತ್ತು ಕರಾವಳಿ ಅನುಭವಗಳನ್ನು ಒಂದೇ ಐಷಾರಾಮಿ ಯಾತ್ರೆಯಲ್ಲಿ ಪ್ರವಾಸಿಗರಿಗೆ ಪರಿಚಯಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಮಾಹಿತಿ ನೀಡಿದ್ದಾರೆ.

ಗುರುವಾರ ಈ ಕುರಿತು ಮಾಹಿತಿ ನೀಡಿರುವ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೋಲ್ಡನ್ ಚಾರಿಯಟ್ ಅನ್ನು ಕರ್ನಾಟಕದ ಪ್ರಮುಖ ಪ್ರೀಮಿಯಂ ಪ್ರವಾಸೋದ್ಯಮ ಉತ್ಪನ್ನವಾಗಿ ಮತ್ತಷ್ಟು ಬಲಪಡಿಸುವ ಕುರಿತು ವಿಶೇಷ ಆಸಕ್ತಿ ವಹಿಸಿರುವ ಹಿನ್ನೆಲೆಯಲ್ಲಿ, ಅತಿಥಿ ಅನುಭವವನ್ನು ಉತ್ತಮಪಡಿಸುವುದು ಹಾಗೂ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸ ಮಾರುಕಟ್ಟೆಯಲ್ಲಿ ಅದರ ಸ್ಥಾನವನ್ನು ಬಲಪಡಿಸುವುದಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಐದು ರಾತ್ರಿ-ಆರು ದಿನಗಳ ಮೊದಲ ‘ಪ್ರೈಡ್ ಆಫ್ ಕರ್ನಾಟಕ’ ಐಷಾರಾಮಿ ಯಾತ್ರೆಗೆ ಶೇ.100ರಷ್ಟು ಬುಕ್ಕಿಂಗ್ ದೊರೆತಿದ್ದು, 75 ಅತಿಥಿಗಳು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಸುಮಾರು 60 ಸಿಬ್ಬಂದಿ ರೈಲಿನಲ್ಲಿ ಆತಿಥ್ಯ ಮತ್ತು ಇತರೆ ಸೇವೆಗಳನ್ನು ಒದಗಿಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೋಲ್ಡನ್ ಚಾರಿಯಟ್ ಅನ್ನು ಕರ್ನಾಟಕದ ಪ್ರಮುಖ ಐಷಾರಾಮಿ ಪ್ರವಾಸೋದ್ಯಮ ಉತ್ಪನ್ನವಾಗಿ ಮತ್ತಷ್ಟು ಬಲಪಡಿಸುವ ಕುರಿತು ವಿಶೇಷ ಆಸಕ್ತಿ ವಹಿಸಿದ್ದಾರೆ.

ಉತ್ತಮ ಆತಿಥ್ಯದ ಜೊತೆಗೆ ಕರ್ನಾಟಕದ ವೈವಿಧ್ಯಮಯ ಪ್ರವಾಸಿ ಅನುಭವಗಳನ್ನು ಆಯ್ದ ಯಾತ್ರೆಯ ಮೂಲಕ ಪರಿಚಯಿಸಿ, ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರೀಮಿಯಂ ಪ್ರವಾಸ ಮಾರುಕಟ್ಟೆಯಲ್ಲಿ ಗೋಲ್ಡನ್ ಚಾರಿಯಟ್‍ಗೆ ಬಲವಾದ ಸ್ಥಾನ ಕಲ್ಪಿಸುವುದು ನಮ್ಮ ಗುರಿ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಐಷಾರಾಮಿ ಯಾತ್ರೆ: ‘ಪ್ರೈಡ್ ಆಫ್ ಕರ್ನಾಟಕ’ ಯಾತ್ರೆಯಲ್ಲಿ ಬಂಡೀಪುರದ ವನ್ಯಜೀವಿ, ಮೈಸೂರಿನ ರಾಜವೈಭವ, ಬೇಲೂರು-ಹಳೇಬೀಡಿನ ವಾಸ್ತುಶಿಲ್ಪ ಪರಂಪರೆ, ಚಿಕ್ಕಮಗಳೂರಿನ ಕಾಫಿ ತೋಟಗಳು, ಯುನೆಸ್ಕೋ ವಿಶ್ವ ಪರಂಪರೆ ತಾಣ ಹಂಪಿ ಹಾಗೂ ಗೋವಾದ ಕರಾವಳಿ ಮತ್ತು ಇಂಡೋ-ಪೋರ್ಚುಗೀಸ್ ಪರಂಪರೆ ಒಂದೇ ಯಾತ್ರೆಯಲ್ಲಿ ಒಳಗೊಂಡಿವೆ.

ಗೋಲ್ಡನ್ ಚಾರಿಯಟ್‍ನ ವಿಶೇಷತೆ ಕೇವಲ ರೈಲಿನ ಐಷಾರಾಮಿಯಲ್ಲ. ವನ್ಯಜೀವಿ ಮತ್ತು ರಾಜವೈಭವದಿಂದ ಹಿಡಿದು ವಿಶ್ವ ಪರಂಪರೆ, ಕಾಫಿ ನಾಡು ಮತ್ತು ಕರಾವಳಿವರೆಗೆ ವಿಭಿನ್ನ ಅನುಭವಗಳನ್ನು ಒಂದೇ ಯಾತ್ರೆಯಲ್ಲಿ ನೀಡುವ ಸಾಮಥ್ರ್ಯದಲ್ಲಿದೆ. ಪ್ರತಿಯೊಂದು ಯಾತ್ರೆಯೂ ಕರ್ನಾಟಕದ ಪ್ರವಾಸೋದ್ಯಮ ವೈವಿಧ್ಯತೆಯನ್ನು ದೇಶ-ವಿದೇಶದ ಪ್ರವಾಸಿಗರಿಗೆ ಪರಿಚಯಿಸುವ ವೇದಿಕೆಯಾಗಬೇಕು ಎಂದು ಕೆ.ಜೆ.ಜಾರ್ಜ್ ಹೇಳಿದರು.

ಹೊಸ ಋತುವಿಗೆ ಮುನ್ನ ರೈಲಿನ ನಿಗದಿತ ತಾಂತ್ರಿಕ ನಿರ್ವಹಣೆಯನ್ನು 2026ರ ಮೇ ತಿಂಗಳಿನಿಂದ ಆಗಸ್ಟ್ ವರೆಗೆ ಮೈಸೂರು ವರ್ಕ್‍ಶಾಪ್‍ನಲ್ಲಿ ಕೈಗೊಳ್ಳಲಾಗಿದೆ. ಹೊರಾಂಗಣಕ್ಕೆ ಹೊಸ ರೂಪ ನೀಡಲಾಗಿದ್ದು, ಅತಿಥಿ ಸೇವೆ ಮತ್ತು ಅಡುಗೆ ವ್ಯವಸ್ಥೆಗಳನ್ನು ಬಲಪಡಿಸಲಾಗಿದೆ. ಅಡುಗೆ ವಿಭಾಗದಲ್ಲಿ ಕಾಂಬಿ ಓವನ್, ಹೆಚ್ಚಿನ ಸಾಮಥ್ರ್ಯದ ಇಂಡಕ್ಷನ್ ವ್ಯವಸ್ಥೆ ಹಾಗೂ ಸುಧಾರಿತ RO ನೀರು ಶುದ್ಧೀಕರಣ ಘಟಕ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಮೊದಲ ಯಾತ್ರೆಗೆ ದೊರೆತಿರುವ ಉತ್ತಮ ಪ್ರತಿಕ್ರಿಯೆಯನ್ನು ಆಧರಿಸಿ, ಗೋಲ್ಡನ್ ಚಾರಿಯಟ್‍ನ ವಿಶಿಷ್ಟ ಯಾತ್ರಾ ಮಾರ್ಗಗಳು ಮತ್ತು ಪ್ರೀಮಿಯಂ ಪ್ರವಾಸಿ ಅನುಭವವನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಒತ್ತು ನೀಡಲಿದೆ. 2026-27ರ ಋತುವಿನಲ್ಲಿ ಒಟ್ಟು 13 ಯಾತ್ರೆಗಳು ನಿಗದಿಯಾಗಿದ್ದು, ‘ಪ್ರೈಡ್ ಆಫ್ ಕರ್ನಾಟಕ’ದಡಿ 7, ಗ್ಲಿಂಪಸ್ ಆಫ್ ಕರ್ನಾಟಕದಡಿ 3 ಹಾಗೂ ಜೆವೆಲ್ಸ್ ಆಫ್ ಸೌಥ್ ದಡಿ 3 ಯಾತ್ರೆಗಳು ನಡೆಯಲಿವೆ.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ.ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಮೊದಲ ಯಾತ್ರೆಗೆ ದೊರೆತಿರುವ ಶೇ.100ರಷ್ಟು ಬುಕ್ಕಿಂಗ್ ಉತ್ತಮ ಆರಂಭವಾಗಿದೆ. ಈಗ ಈ ಬೇಡಿಕೆಯನ್ನು ಇಡೀ ಋತುವಿನವರೆಗೆ ಉಳಿಸಿಕೊಳ್ಳುವುದು ಮುಖ್ಯ. ರೈಲಿನ ಆತಿಥ್ಯ ಸೇವೆ, ತಾಣಗಳಲ್ಲಿನ ಅನುಭವ, ಮಾರುಕಟ್ಟೆ ಮತ್ತು ಬುಕ್ಕಿಂಗ್ ವ್ಯವಸ್ಥೆಯನ್ನು ಬಲಪಡಿಸಿ, ಗೋಲ್ಡನ್ ಚಾರಿಯಟ್ ಅನ್ನು ಪ್ರೀಮಿಯಂ ಪ್ರವಾಸ ಮಾರುಕಟ್ಟೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಸ್ಥಾಪಿಸಲಾಗುವುದು ಎಂದರು.

ಕೆಎಸ್‍ಡಿಸಿ ಅಧ್ಯಕ್ಷ ಎಂ.ಶ್ರೀನಿವಾಸ್ ಮಾತನಾಡಿ, ಮೊದಲ ಯಾತ್ರೆಗೆ ದೊರೆತಿರುವ ಉತ್ತಮ ಪ್ರತಿಕ್ರಿಯೆ ಪ್ರೋತ್ಸಾಹದಾಯಕ. ಈ ಯಶಸ್ಸನ್ನು ಮುಂದಿನ ಯಾತ್ರೆಗಳಿಗೂ ವಿಸ್ತರಿಸಿ, ಕರ್ನಾಟಕದ ವೈವಿಧ್ಯಮಯ ಪ್ರವಾಸಿ ಅನುಭವಗಳನ್ನು ಹೆಚ್ಚಿನ ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ತಲುಪಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor