ಹೊಸದಿಲ್ಲಿ : ಕರ್ನಾಟಕದ ಪ್ರಮುಖ ಯೋಜನೆಗಳಾದ ಶರಾವತಿ ಪಂಪ್ಡ್ ಸ್ಟೋರೇಜ್ ಹಾಗೂ ಮೇಕೆದಾಟು ಯೋಜನೆಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಅನುಮೋದನೆ ನೀಡಬೇಕು ಹಾಗೂ ಕಸ್ತೂರಿ ರಂಗನ್ ವರದಿ ವಿಚಾರವಾಗಿ ಭೌತಿಕ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಕರಡು ಅಧಿಸೂಚನೆ ಅಂತಿಮಗೊಳಿಸದಂತೆ ಕೇಂದ್ರ ಸರಕಾರಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಗುರುವಾರ ಹೊಸದಿಲ್ಲಿಯ ಪರಿಸರ ಭವನದಲ್ಲಿ ಕೇಂದ್ರ ಪರಿಸರ, ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ಅವರು, ರಾಜ್ಯದ ಯೋಜನೆಗಳ ಕುರಿತು ಮನವಿ ಸಲ್ಲಿಸಿದರು.

ಕಸ್ತೂರಿ ರಂಗನ್ ವರದಿ: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹೊರಡಿಸಿರುವ ಏಳನೇ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸದಂತೆ ಕೇಂದ್ರ ಸಚಿವರಿಗೆ ಮುಖ್ಯಮಂತ್ರಿ ವಿನಂತಿ ಮಾಡಿದರು.

ಕಸ್ತೂರಿರಂಗನ್ ವರದಿಯ ಆಧಾರದ ಮೇಲೆ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯು ಜು.27ರಂದು ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸದಂತೆ ಕೋರಿ ಸೆ.25ರಂದು ಪತ್ರದ ಮೂಲಕ ಪ್ರಧಾನಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ವರದಿ ಸಲ್ಲಿಕೆಯಾಗಿ, ಒಂದು ವರ್ಷದ ಅವಧಿಯಲ್ಲಿ ಭೌತಿಕ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಇದನ್ನು ಅಂತಿಮಗೊಳಿಸಬಾರದು ಮತ್ತು ರಾಜ್ಯ ಸರಕಾರದ ಸಮಾಲೋಚನೆಯೊಂದಿಗೆ ಭಾರತ ಸರಕಾರವು ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಮುಖ್ಯಮಂತ್ರಿ ಕೋರಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತಾಪ ಕುರಿತು ಕೊನೆಯ ಬಾರಿಗೆ ಪ್ರಸಕ್ತ ಸಾಲಿನ ಫೆ.28 ರಂದು ನಡೆದ ಎಸ್‍ಸಿ-ಎನ್‍ಬಿಡಬ್ಲ್ಯುಎಲ್ ನ 89ನೆ ಸಭೆಯಲ್ಲಿ ಚರ್ಚಿಸಲಾಯಿತು. ತಾಂತ್ರಿಕ ಸಮಿತಿಯು ಎತ್ತಿದ ಅಂಶಗಳಿಗೆ ಸ್ಪಷ್ಟೀಕರಣ ಹಾಗೂ ಎನ್‍ಐಎಎಸ್ ನಿಂದ ತಾಂತ್ರಿಕ ವರದಿಯನ್ನು ಸಲ್ಲಿಸುವಂತೆ ರಾಜ್ಯ/ಬಳಕೆದಾರ ಸಂಸ್ಥೆಗೆ ಸೂಚಿಸಲಾಗಿತ್ತು ಎಂದು ಅವರು ಹೇಳಿದರು.

ಈ ಸಂಬಂಧ ಬೆಂಗಳೂರಿನ ‘ನ್ಯಾಷನಲ್ ಇನ್ಸ್‌ ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್' (ಎನ್‍ಐಎಎಸ್) ವರದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದರ ಜೊತೆಗೆ, ಸ್ಥಾಯಿ ಸಮಿತಿಯು ಎತ್ತಿದ ಪ್ರಶ್ನೆಗಳಿಗೆ ರಾಜ್ಯ ಸರಕಾರವು ಸೂಕ್ತ ಉತ್ತರಗಳನ್ನು ನೀಡಿದೆ ಎಂದು ಶಿವಕುಮಾರ್ ವಿವರಿಸಿದರು.

ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆ: ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಭೂ-ತಾಂತ್ರಿಕ ಸಮೀಕ್ಷೆಗಾಗಿ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಒಟ್ಟು 0.0000352 ಹೆಕ್ಟೇರ್ ಪ್ರದೇಶದಲ್ಲಿ 20 ಬೋರ್ ಹೋಲ್ ಗಳನ್ನು ಕೊರೆಯಲು ಅನುಮತಿ ಕೋರುವ ಈ ಪ್ರಸ್ತಾಪವನ್ನು ರಾಷ್ಟ್ರೀಯ ವನ್ಯ ಜೀವಿ ಮಂಡಳಿಯ ಸ್ಥಾಯಿ ಸಮಿತಿ ಪರಿಶೀಲನೆಗಾಗಿ ಜು.1 ರಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸಲ್ಲಿಸಲಾಗಿತ್ತು ಎಂದು ಮುಖ್ಯಮಂತ್ರಿ ಗಮನ ಸೆಳೆದರು.

ಇತ್ತೀಚೆಗೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮುಂದೆ ಬಾಕಿ ಇರುವ ವಿವಿಧ ಅರ್ಜಿಗಳ ಸ್ಥಿತಿಗತಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅಗತ್ಯ ದಾಖಲೆ/ಮಾಹಿತಿಯನ್ನು ಕೋರಿದ್ದು, ಅದನ್ನು ಶೀಘ್ರದಲ್ಲೇ ಒದಗಿಸಲಾಗುವುದು. ಆದರೆ, ಈ ಪ್ರಸ್ತಾಪವು ಕೇವಲ ಸಮೀಕ್ಷೆ ಮತ್ತು ತನಿಖಾ ಚಟುವಟಿಕೆಗಳಿಗೆ ಮಾತ್ರ ಸಂಬಂಧಿಸಿದ್ದು, ಪ್ರಸ್ತುತ ಯಾವುದೇ ಸಂರಕ್ಷಿತ ಪ್ರದೇಶದ ಭೂಮಿಯನ್ನು ಯೋಜನೆಗೆ ಬಳಸಿಕೊಳ್ಳಲು ಕೋರುತ್ತಿಲ್ಲ ಎಂದು ಶಿವಕುಮಾರ್ ವಿವರಿಸಿದರು.

ಈ ನಿಟ್ಟಿನಲ್ಲಿ, ಎನ್‍ಬಿಡಬ್ಲ್ಯುಎಲ್ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ, ಮೇಲ್ಕಂಡ ಎರಡು ಪ್ರಸ್ತಾಪಗಳನ್ನು ಶೀಘ್ರವಾಗಿ ಪರಿಶೀಲಿಸಿ ಶಿಫಾರಸು ಮಾಡಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ಬೆಳಗಾವಿಯ ಎಕೊ ಕೇನ್ ಶುಗರ್ ಅಂಡ್ ಎನರ್ಜಿ ಲಿ. ಸಕ್ಕರೆ ಕಾರ್ಖಾನೆಯು 2016 ಕ್ಕೂ ಮೊದಲು ಪ್ರಾರಂಭವಾಗಿರುವುದರಿಂದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುವುದಿಲ್ಲ. ಈ ಸಕ್ಕರೆ ಕಾರ್ಖಾನೆಯಲ್ಲಿ ಸುಮಾರು 500 ಕೆಲಸಗಾರರು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 5 ಸಾವಿರ ಕುಟುಂಬಗಳು ಈ ಕಾರ್ಖಾನೆಯನ್ನು ಅವಲಂಬಿಸಿವೆ. ಆದುದರಿಂದ, ಈ ಸಕ್ಕರೆ ಕಾರ್ಖಾನೆಯನ್ನು ಪರಿಸರ ಸೂಕ್ಷ್ಮ ವಲಯದಿಂದ ಕೈಬಿಡಬೇಕು ಎಂದು ಶಿವಕುಮಾರ್ ಮನವಿ ಮಾಡಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor